ಯಾವುದೇ ಇ-ಮೇಲ್ ನಿಮಗೆ ಗೊತ್ತಿರುವ ವ್ಯಕ್ತಿಯಿಂದ ಸ್ವೀಕರಿಸಿದ್ದು ಆದರೆ ಆತನ ಇ-ಮೇಲ್ ವಿಳಾಸ ಅನುಮಾನಾಸ್ಪದವಾಗಿದ್ದರೆ ಅಂತಹ ಇ-ಮೇಲ್ ಗಳ ಬಗ್ಗೆ ಜಾಗರೂಕತೆಯಿಂದ ನಿರ್ವಹಿಸಿ ಮತ್ತು ಸೈಬರ್ ತಾಣಗಳಲ್ಲಿ ನಿಮ್ಮ ಇ-ಮೇಲ್ ಬಳಕೆ ಬಹಳ ಎಚ್ಚರಿಕೆಯಿಂದಿರಲಿ, ಸ್ವಲ್ಪ ಮೈಮರೆತರು ಭಾರಿ ಬೆಲೆ ತೆತ್ತಬೇಕಾಗುತ್ತದೆ.
"ದಯವಿಟ್ಟು ಕ್ಷಮಿಸಿ, ನಾನು ವಿಚಾರ ಸಂಕೀರ್ಣಕ್ಕೆಂದು ಭಾಗವಹಿಸಲು ಇಂಗ್ಲೆಂಡ್‌ಗೆ ಪ್ರಯಾಣ ಬೆಳಸಿದ್ದನ್ನು ನಿಮಗೆ ತಿಳಿಸಿರಲಿಲ್ಲ. ಆದರೆ ನೀವು ಈ ಇ-ಮೇಲ್ ಸ್ವೀಕರಿಸಿದ ಕೂಡಲೇ ನನಗೆ ತುರ್ತು ಸಹಾಯಕ್ಕೆ ಬರಬೇಕಾಗಿದೆ, ನಾನು ಹೋಟಲ್‌ಗೆ ಹೋಗುವಾಗ ಮಧ್ಯದಲ್ಲಿ ನನ್ನ ಪರ್ಸು ಕಳೆದುಕೊಂಡಿದ್ದೇನೆ, ಇದರಿಂದ ನನಗೆ ಸದ್ಯದಲ್ಲಿ ಹೋಟಲ್‌ನ ಬಿಲ್ ಪಾವತಿ ಮಾಡಿ ಮನೆಗೆ ಹಿಂದುರುಗಲು ನನಗೆ 3500 ಡಾಲರುಗಳ ಅವಶ್ಯಕತೆ ಇರುತ್ತದೆ. ಯಾವುದೇ ರೀತಿಯಿಂದಲಾದರು ಸರಿ ನನಗೆ ಸಹಾಯ ಮಾಡಿದರೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ಒಮ್ಮೆ ಮನೆಗೆ ಹಿಂತಿರುಗಿದಾಗ ನಿಮ್ಮ ಹಣವನ್ನು ಮರುಪಾವತಿಸುತ್ತೇನೆ". ಇಂತಿ, ಮಣಿಶಂಕರ್ ಐಯ್ಯರ್, ಮಾಜಿ ಕೇಂದ್ರ ಸಂಪುಟ ಸಚಿವ.
ಆಶ್ಚರ್ಯವೇ? ನಿಜವಾಗಲೂ ಈ ಮೇಲಿನ ಸಂದೇಶ ಮಾನ್ಯ ಮಣಿಶಂಕರ್ ಐಯ್ಯರ್‌ರವರ ವೈಯಕ್ತಿಕ ಹಾಟ್ ಮೇಲ್ ಇ-ಮೇಲ್ ಐಡಿಯಿಂದ ಅವರ ಇ-ಮೇಲ್ ಅಕೌಂಟಿನಲ್ಲಿದ್ದ ಇತರೇ ಸ್ನೇಹಿತರಿಗೆ ಮತ್ತು ಪರಿಚಯಸ್ತರಿಗೆ ರವಾನೆಯಾದದ್ದು. ಇದರಲ್ಲಿ ಕೂತಹಲಕಾರಿ ವಿಷಯವೆಂದರೆ ಇದರ ಬಗ್ಗೆ ಸ್ವತಃ ಮಣಿಶಂಕರ್ ಐಯ್ಯರ್‌ರವರಿಗೆ ಅರಿವಿಲ್ಲದಿರುದು. ವಾಸ್ತವವಾಗಿ ಮಣಿಶಂಕರ್ ಐಯ್ಯರ್‌ರವರ ವೈಯಕ್ತಿಕ ಇ-ಮೇಲ್ ಐಡಿಯ ಮಾಹಿತಿಯನ್ನು ಅನ್ಯರು ಕಾನೂನಿನ ವಿರುದ್ದವಾಗಿ ಭಿನ್ನಗೊಳಿಸಿ ಅಕ್ರಮವಾಗಿ ಪ್ರವೇಶ ಪಡೆದು ಈ ಇ-ಮೇಲ್ ಮೂಲಕ ಅಲ್ಲಿದ್ದ ವಿಳಾಸಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಮಣಿಶಂಕರ್ ಐಯ್ಯರ್‌ರವರು "ನಾನು ಪ್ರವಾಸ ಕೈಗೊಂಡಿದ್ದು ಅಮೇರಿಕಾದ ಕೊಲಂಬೋ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ವಿಚಾರ ಸಂಕೀರ್ಣಕ್ಕೆ ಭಾಗವಹಿಸಲೇಂದು, ಇದರ ಸ್ವಷ್ಟ ಮಾಹಿತಿ ತಿಳಿದುಕೊಂಡು ಮತ್ತು ನನ್ನ ಈ-ಮೇಲ್ ಅಕೌಂಟನ್ನು ಭಿನ್ನಗೊಳಿಸಿದ್ದಲ್ಲದೇ (ಹ್ಯಾಕ್ ಮಾಡಿದ್ದಲ್ಲದೇ) ನನ್ನ ಇ-ಮೇಲ್ ಗುಪ್ತ ಪದವನ್ನು (ಪಾಸ್‌ವರ್ಡ್‌ನ್ನು) ಸಹಾ ಬದಲಿಸಿ ನನ್ನ ಇ-ಮೇಲ್ ಅಕೌಂಟಿಗೆ ನನ್ನ ಪ್ರವೇಶವನ್ನು ಸಹಾ ನಿರ್ಬಂಧಿಸಿದ್ದಾರೆ. ಆದ್ದರಿಂದ ಈ ದುರುದ್ದೇಶಪೂರಿತ ಇ-ಮೇಲ್‌ನ್ನು ಸ್ವೀಕರಿಸಿದ ಎಲ್ಲರೂ ನಿರ್ಲಕ್ಷಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ" ಎಂದು ಸ್ಪಷ್ಟಪಡಿಸಿದ್ದರು.
ಸೈಬರ್ ಅಪರಾಧಿಗಳು ಇತ್ತೀಚೆಗೆ ಮುಂಬೈ ಮೂಲದ ಹೆಸರಾಂತ ಮನೋತಜ್ಞ ಡಾ. ಯೂಸುಫ್ ಅವರ ಇ-ಮೇಲ್ ಐಡಿಯಿಂದ ಹೋಟಲ್ ಬಿಲ್‌ನ ಮರುಪಾವತಿಗಾಗಿ 2000 ಡಾಲರುಗಳಿಗಾಗಿ ಅವರ ಇ-ಮೇಲ್ ಅಕೌಂಟಿನಲ್ಲಿ ಲಭ್ಯವಿದ್ದ ಸ್ನೇಹಿತರಿಗೆ ಮತ್ತು ಪರಿಚಯಸ್ತರಿಗೆ ರವಾನೆಯಾಗಿ ಸಹಾಯಕ್ಕೆ ಮೊರೆಯಿಟ್ಟಿದ್ದರು. ಇದರ ಮೇರೆಗೆ ಹಲವು ಕರೆಗಳನ್ನು ಸ್ವೀಕರಿಸಿದ ಡಾ.ಯೂಸಫ್ ಪರಿಸ್ಥಿತಿ ಮನಗಂಡು ಕೂಡಲೇ ಪೋಲಿಸ್‌ಗೆ ದೂರು ನೀಡಿದರು. ಈ ದೂರಿನ ಮೇರೆ ತಪಾಸಣೆ ಕೈಗೊಂಡ ಪೋಲಿಸರ ಪ್ರಾಥಮಿಕ ವರದಿಯಂತೆ ಇದರ ಹಿಂದೆ ಸೈಬರ್ ಅಪರಾಧಿಗಳು ಇಥಿಯೋಫಿಯಾದಲ್ಲಿ ಗುಂಪಾಗಿ ವ್ಯವಸ್ಥಿತ ಕಾರ್ಯ ಚಟುವಟಿಕೆ ನಡೆಸಿರುವುದು ಕಂಡುಹಿಡಿದಿದ್ದಾರೆ. ಹೆಚ್ಚಿನ ತನಿಖೆಗಾಗಿ ಅಲ್ಲಿನ ಅಂತರ್ಜಾಲ ಸೇವಾ ಸಂಪರ್ಕ ಸಂಸ್ಥೆಗೆ (ಇಂಟರ್‌ನೆಟ್ ಸರ್ವಿಸ್ ಪ್ರವೈಡರ್‌ಗೆ) ಮಾಹಿತಿಗಾಗಿ ಮನವಿ ಮಾಡಿಕೊಂಡಿದ್ದಾರೆ. ಅಷ್ಟಲ್ಲದೇ, ಪೋಲಿಸರ ಗುಮಾನಿಯಂತೆ ಇದೇ ರೀತಿಯ ವ್ಯವಸ್ಥಿತ ಜಾಲವೊಂದು ನೈಜಿರಿಯನ್ ಅನ್‌ಲೈನ್ ಜಾಬ್‌ರಾಕೆಟ್ ಹೆಸರಿನಲ್ಲಿ ಜನರನ್ನು ಕೆಲಸ ಕೊಡಿಸುವ ಅಮಿಷವೊಡ್ಡಿ ವಂಚಿಸುತ್ತಿರುವುದನ್ನು ಹೊಲಿಕೆ ಮಾಡಿ ಇದರ ಐಪಿ ವಿಳಾಸದ ಮೇಲೆ ಬಲೆ ಬೀಸಲು ಪ್ರಾರಂಭಿಸಿದ್ದಾರೆ.
ಇಷ್ಟಕ್ಕೆ ಸೀಮಿತವಾಗಿರದ ಈ ಇ-ಮೇಲ್ ಪ್ರಕರಣಗಳು, ನಮ್ಮ ಅನುಭವವಕ್ಕೂ ನಿಲುಕದಂತೆ ಹಲವು ರೀತಿಯಲ್ಲಿ ನೆಡೆದು ಹೋಗುತ್ತವೆ, ಉದಾ:
ಅ. ಇ-ಮೇಲ್ ಸ್ಪೂಫಿಂಗ್‌ಗಳು : ಸ್ವೀಕರಿಸುವ ಮೇಲ್‌ಗಳು ಯಾವಾಗಲು ತಮ್ಮ ಸೃಷ್ಟಿ ಮೂಲದ ಮಾಹಿತಿಯನ್ನು ಬಿತ್ತರಿಸಿದ್ದರು. ಅವುಗಳ ಮೂಲ ಬೇರೆಯದ್ದೇ ಆಗಿರುತ್ತದೆ.
ಆ. ಇ-ಮೇಲ್ ಸ್ಪ್ಯಾಮಿಂಗ್ ಮತ್ತು ಫಿಷಿಂಗ್ : ಸಾಮಾನ್ಯವಾಗಿ ಸ್ಪ್ಯಾಮಿಂಗ್ ಮೇಲ್ ಗಳು ಹೆಚ್ಚು ಆಕರ್ಷಣೀಯವಾಗಿ ಮತ್ತು ಅವಶ್ಯವಿಲ್ಲದವಾಗಿರುತ್ತದೆ. ಇವುಗಳನ್ನು ಬಳಕೆದಾರರನ್ನು ಆಕರ್ಷಿಸಲೆಂದೇ ಕಳುಹಿಸುತ್ತಾರೆ. ಇವುಗಳಲ್ಲಿ ಇಮೇಜ್ ಸ್ಪ್ಯಾಮ್‌ಗಳಾಗಿ ಬರುತ್ತಿರುವಂತಹುಗಳನ್ನು ಶೋಧಿಸುವುದು ಅತಿ ಕಷ್ಟಕರವಾದ ಕೆಲಸವಾಗುತ್ತಿದೆ. ಇತ್ತೀಚೆಗೆ ರಷ್ಯಾದ ಭಾಷೆಯ ಲಿಪಿಗಳನ್ನು ಬಳಸಿ ಇಂಗ್ಲೀಷ್ ಭಾಷೆಯನ್ನು ಗೌಪ್ಯವಾಗಿಡುವುದು ಹೊಸ ಮಾದರಿಯ ಇ-ಮೇಲ್ ಸ್ಪ್ಯಾಮಿಂಗ್ ಆಗಿವೆ. ಆದರೆ, ಇದೇ ಮಾದರಿಯ ಫಿಷಿಂಗ್ ಇ-ಮೇಲ್‌ಗಳು ಕಾನೂನು ಭಾಹಿರವಾದ ಕೃತ್ಯವನ್ನು ಎಸಗುವಂತಹವು, ಇಂತಹ ಫಿಷಿಂಗ್ ಇ-ಮೇಲ್‌ಗಳು ನಿಮ್ಮ ವೈಯಕ್ತಿಕ ಮಾಹಿತಿಗಳ ಸೋರಿಕೆಗೆ ಕೈಹಾಕುತ್ತವೆ ಉದಾ: ಬಳಕೆದಾರರ ಹೆಸರು, ಪಾಸ್‌ವರ್ಡ್, ಕ್ರೇಡಿಟ್ ಕಾರ್ಡ್ ಮಾಹಿತಿ, ಅಕೌಂಟ್ ಮಾಹಿತಿಗಳು ಇತ್ಯಾದಿ.
ಇ. ದೋಷಪೂರ್ಣ ಇಮೇಲ್‌ಗಳು : ಸಾಮಾನ್ಯವಾಗಿ ಇಂತಹ ಇ-ಮೇಲ್‌ಗಳಲ್ಲಿ ವೈರಸ್‌ಗಳನ್ನು ಅಥವಾ ಟ್ರೊಜನ್‌ಗಳನ್ನು ಲಗತ್ತಿಸಲಾಗಿರುತ್ತದೆ ಅಥವಾ ಇತರೇ ವೆಬ್ ತಾಣಗಳಿಗೆ ದುರುದ್ದೇಶ ಕೋಡ್‌ಗಳನ್ನು ಡೌನ್‌ಲೋಡ್ ಮಾಡಲು ಅಥವಾ ಸಂಪರ್ಕ ಪಡೆಯಲು ಆಹ್ವಾನಿಸುವುದು.
ಈ. ಇನ್ನೂ ಹಲವು ರೀತಿಯ ಇ-ಮೇಲ್‌ಗಳು ಅಂದರೆ, ಪದೇ-ಪದೇ ಪುನಾರವರ್ತಿಯಾಗಿ ಸ್ವೀಕರಿಸುವ ಇ-ಮೇಲ್ ಬಾಂಬಿಂಗ್‌ಗಳು, ಇತ್ತೀಚಿನ ಸಂಸತ್ತಿನ ಮೇಲೆ ನೆಡೆದ ದಾಳಿ ಪ್ರಕರಣದಲ್ಲು ಬಳಸಿಕೊಳ್ಳಲಾಗಿದ್ದ ಭಯೋತ್ವಾದಕ ಇ-ಮೇಲ್‌ಗಳು, ಇನ್ನೋಬ್ಬರ ಮಾನಕ್ಕೆ ಧಕ್ಕೆ ತರುವ ಮಾನಹಾನಿಕಾರ ಇ-ಮೇಲ್‌ಗಳು, ಕೆಲಸದ ಆಮಿಷವೋಡ್ಡುವ ಅಥವಾ ಲಾಟರಿ ವಿಜೇತರೆಂದು ಘೋಷಿಸಿ ಅಕ್ರಮ ರೀತಿಯಿಂದ ಹಣ ವಂಚಿಸಲು ಬಲಸುವ ಮೋಸಗಾರಿಕೆಯ ಇ-ಮೇಲ್‌ಗಳು, ಕೃತಕ ಇ-ಮೇಲ್ ಐಡಿಗಳನ್ನು ಸೃಷ್ಟಿಸಿ ಅಥವಾ ಮತ್ತೊಬ್ಬರ ಇ-ಮೇಲ್ ಐಡಿಗಳನ್ನು ಬಳಸಿ ವಂಚಿಸಲು ಪ್ರಯತ್ನಿಸುವುದು ಇತ್ಯಾದಿ.
ಆದ್ದರಿಂದ, ಸೈಬರ್ ಅಪರಾಧ ಎಸಗಲು ಇ-ಮೇಲ್ ಒಂದು ಸಾಮಾನ್ಯ ಅಸ್ತ್ರವಾಗಿದ್ದು ಇದರ ಬಗ್ಗೆ ಎಚ್ಚರಗೊಳ್ಳದಿದ್ದರೆ ಹೆಚ್ಚು ಪರಿಣಾಮ ಬೀರುವಂತಹದಾಗಿದೆ. ನಮಗೆ ಯಾವಾಗಲು ಲಭ್ಯವಿರುವ ಯಾಹೂ ಅಥವಾ ಜಿಮೇಲ್ ಇತ್ಯಾದಿ ಸೊಷಿಯಲ್ ನೆಟ್‌ವರ್ಕ್‌ಗಳಲ್ಲಿ ಸಂಪರ್ಕ ಹೊಂದಲು ಬಳಸುವ ಮುಕ್ತ ಇ-ಮೇಲ್ ಸೇವೆಗಳನ್ನು ಬಹಳ ಜಾಗರೂಕತೆಯಿಂದ ಬಳಸಬೇಕಾಗುತ್ತದೆ. ಇದನ್ನು ದುರ್ಬಳಕೆ ಮಾಡಿಕೊಂಡಾಗ ಸೈಬರ್ ಅಪರಾಧಕ್ಕೆ ಗುರಿಯಾಗಬೇಕಾಗುತ್ತದೆ. ಉದಾ: ಇತ್ತೀಚೆಗೆ ನಮ್ಮ ಉಡುಪಿ ಜಿಲ್ಲೆಯ ಯುವಕನೊಬ್ಬ ಮಾಜಿ ರಾಷ್ಟ್ರಪತಿ ಮಾನ್ಯ ಅಬ್ದುಲ್ ಕಲಾಮ್‌ರವರ ಹೆಸರಿನಲ್ಲಿ ಇ-ಮೇಲ್ ಐಡಿ apj_abdul_kalam@in.com ಎಂದು ಸೃಷ್ಟಿಸಿದ್ದಲ್ಲದೆ ಬೇರೆಯವರಿಗೆ ನಂಬಿಕೆ ಬರುವಂತೆ ಸಂಭಾಷಿಸಿ ವ್ಯವಹರಿಸಿದ್ದಕ್ಕಾಗಿ ಇಂದು ಪೋಲಿಸರ ಅತಿಥ್ಯಕ್ಕೆ ಒಳಗಾಗಿದ್ದಾನೆ. ಇದೇ ರೀತಿಯಲ್ಲಿ ಪುಣೆಯಲ್ಲಿ 21 ವರ್ಷದ ಬಾಲಕನೊಬ್ಬ ಭಯೋತ್ವಾದನಾ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಇ-ಮೇಲ್ ಕಳುಹಿಸಿ ಪೋಲಿಸರಿಗೆ ಸಿಕ್ಕಿ ಹಾಕಿಕೊಂಡಾಗ ತನ್ನ ಹುಡುಗಾಟಿಕೆಯನ್ನು ಒಪ್ಪಿಕೊಂಡಿದ್ದಾನೆ.
ಕಾನೂನುನಿನ ಚೌಕಟ್ಟಿನಲ್ಲಿ ಇಂತಹ ಸೈಬರ್ ಅಪರಾಧಗಳನ್ನು ತಪಾಸಣೆ ಮಾಡಿ ಸಾಕ್ಷ್ಯ ಋಜುವಾತುಪಡಿಸಬೇಕಾದರೆ ಆ ಇ-ಮೇಲ್‌ನ ಸೃಷ್ಟಿಸಲು ಸಹಾಯವಾದ ಅಂತರ್ಜಾಲ ಸೇವಾ ಸಂಪರ್ಕ ಸಂಸ್ಥೆ ಅದರ ಚಿನ್ಹೆ, ದಿನಾಂಕ, ವಿಳಾಸ, ತಯಾರಿಸಲು ಬಳಸಿದ ಕಂಪ್ಯೂಟರ್ ಮತ್ತು ಇದರ ಐಪಿ ವಿಳಾಸಗಳ ಆಧಾರಗಳೇ ನಿರ್ಣಾಯಕಗಳಾಗಿರುತ್ತವೆ. ಒಂದು ವೇಳೆ ಇದು ನಕಲಿ ಇ-ಮೇಲ್ ಆಗಿದ್ದರೆ ಆ ಸಮಯದಲ್ಲಿ ಆ ಕಂಪ್ಯೂಟರನ್ನು ಬಳಸಿದ್ದವರು ಯಾರು ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ. ಆದರೆ ಇಂತಹ ಕೃತ್ಯಗಳನ್ನು ಯಾರೇ ವ್ಯಕ್ತಿಯು ಭಾರತದ ಹೊರಗೆ ಮಾಡಿದರೆ ಅಂತಹ ಸಮಯದಲ್ಲಿ ಸಂಬಂಧಪಟ್ಟ ದೇಶಗಳೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಆಧರಿಸಿರುತ್ತದೆ. ಆದರೂ ಈ ಭವಿಷ್ಯದಲ್ಲಿ ಈ ಇ-ಮೇಲ್‌ಗಳ ಮೇಲಿನ ತಪಾಸಣೆ ಹೊಸ ಸವಾಲನ್ನು ನೀಡುತ್ತಿವೆ. ಉದಾ: ಸ್ವಲ್ಪ ದಿನಗಳನ್ನು ಕಳೆದ ನಂತರ ಮಾಹಿತಿಯನ್ನು ನಾಶಗೊಳಿಸಿದ್ದರೆ ಅಥವಾ ಅಲ್-ಖೈದಾ ಭಯೋತ್ವಾದನಾ ತಂಡದವರು ಬಳಸುತ್ತಿದ್ದ ಡೆಡ್ ಲೆಟರ್ ಬಾಕ್ಸ್ ಪದ್ದತಿ (ಈ ಪದ್ದತಿಯಲ್ಲಿ ಒಂದು ಇ-ಮೇಲ್ ವಿಳಾಸವನ್ನು ಸೃಷ್ಟಿ ಮಾಡಿ ಅದರ ಪಾಸ್‌ವರ್ಡ್‌ನ್ನು ಹಲವು ಜನರು ಬಳಸುವುದು. ಇದರಲ್ಲಿ ಯಾವುದೇ ಮಾಹಿತಿ ತಿಳಿಸಬೇಕಾದರೆ ಇದರಲ್ಲೇ ಮಾಹಿತಿಯನ್ನು ಬರೆದು ರಕ್ಷಿಸಿರುತ್ತಾರೆ ಮತ್ತು ಪ್ರಪಂಚದಲ್ಲಿ ಎಲ್ಲಿ ಬೇಕಾದರು ಇದೇ ಇ-ಮೇಲ್ ತೆರೆದು ಮಾಹಿತಿಯನ್ನು ಓದಿಕೊಳ್ಳುವುದು ಇಲ್ಲಿ ಯಾವುದೇ ಇ-ಮೇಲ್ ರವಾನಿಸುವುದಿಲ್ಲ) ಹೀಗೆ ಇನ್ನೂ ಹೊಸ ಅವಿಷ್ಕಾರಗಳು ಸಾಮಾನ್ಯ ಮನುಷ್ಯನಿಗೆ ದೊಡ್ಡ ಪರಿಣಾಮ ಬೀರುವಿದರಲ್ಲಿ ಸಂದೇಹವೇ ಇಲ್ಲ.
ಈ ಇ-ಮೇಲ್ ಮುಖಾಂತರ ಮಾಡುವ ಕಿಡಿಗೇಡಿತನಕ್ಕೆ ಮಾಹಿತಿ ತಂತ್ರಜ್ಞಾನ ಅಧಿನಿಯಮದ-2008ರ ಕಲಮು 66(ಸಿ)ಯಲ್ಲಿ ವಿವರಿಸಿರುವ ವೈಯಕ್ತಿಕ ಮಾಹಿತಿಯ ಅಪಹರಣ ಮಾಡಿದಕ್ಕಾಗಿ ಮತ್ತು ಕಲಮು 66 (ಡಿ)ರ ಅಡಿಯಲ್ಲಿ ಕಂಪ್ಯೂಟರ್ ಸಂಪನ್ಮೂಲಗಳ ಮೂಲಕ ಮೋಸಗೊಳಿಸುವ ಕೃತ್ಯಕ್ಕೆ ಗುರಿಯಾಗಿಸಿ ಮೂರು ವರ್ಷಗಳ ಅವಧಿಯ ಕಾರಾವಾಸದಿಂದ ಅಥವಾ ಒಂದು ಲಕ್ಷ ರೂ.ಗಳವರೆಗಿನ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡನೆ ಒಳಪಡಿಸಬಹುದು.
ಆದ್ದರಿಂದ ನೀವು ಯಾವುದೇ ಇ-ಮೇಲ್ ನಿಮಗೆ ಗೊತ್ತಿರುವ ವ್ಯಕ್ತಿಯಿಂದ ಸ್ವೀಕರಿಸಿದ್ದು ಆದರೆ ಆತನ ಇ-ಮೇಲ್ ವಿಳಾಸ ಅನುಮಾನಾಸ್ಪದವಾಗಿದ್ದರೆ ಅಂತಹ ಇ-ಮೇಲ್ ಗಳ ಬಗ್ಗೆ ಜಾಗರೂಕತೆಯಿಂದ ನಿರ್ವಹಿಸಿ ಮತ್ತು ಸೈಬರ್ ತಾಣಗಳಲ್ಲಿ ನಿಮ್ಮ ಇ-ಮೇಲ್ ಬಳಕೆ ಬಹಳ ಎಚ್ಚರಿಕೆಯಿಂದಿರಲಿ, ಸ್ವಲ್ಪ ಮೈಮರೆತರು ಭಾರಿ ಬೆಲೆ ತೆತ್ತಬೇಕಾಗುತ್ತದೆ.
ಮೂಲ: ದಟ್ಸ್ ಕನ್ನಡ