Monday, June 28, 2010

ನನ್ನ ಅಮೇರಿಕಾ ಜೀವನ.........ಭಾಗ 3 -- ಇಲ್ಲಿ ಎಲ್ಲವೂ ಯಂತ್ರಗಳೇ

ಇಲ್ಲಿ ನೂರಕ್ಕೆ ನೂರು ಪ್ರತಿಶತ ಎಲ್ಲಾ ಕೆಲಸಗಳು ಯಂತ್ರಗಳಿಂದ ನಡೆಯುತ್ತವೆ. ಬಟ್ಟೆ ಒಗೆಯಲು ವಾಶಿಂಗ್ ಮಶೀನ್ , ಅದನ್ನು ಒಣಗಿಸೋದಕ್ಕೆ ಇನ್ನೊಂದು ಮಶೀನ್, ಅದನ್ನು ಐರನ್ ಮಾಡಲಿಕ್ಕೆ ಇನ್ನೊಂದು ಮಶೀನ್, ಹೀಗೆ ಬಟ್ಟೆ ಕೆಲಸಕ್ಕೆ ಬೇಕಾದಷ್ಟು ಯಂತ್ರಗಳನ್ನು ನಾವು ಉಪಯೋಗಿಸುತ್ತೇವೆ. ಹಾಗಂತ ಎಲ್ಲವನ್ನು ನಾವು ಕೊಂಡುಕೊಳೋ ಅವಶ್ಯಕತೆ ಇಲ್ಲ. ಕೆಲವನ್ನು ಬಾಡಿಗೆಗೆ ಪಡೆಯಬಹುದು. ಕೆಲವನ್ನು ಸ್ವಲ್ಪ ಹಣ ಕೊಟ್ಟು ಉಪಯೋಗಿಸಬಹುದು. ನಮ್ಮ ಹೋಟೆಲಿನಲ್ಲಿರೋ ವಾಶಿಂಗ್ ಮಶೀನ್ ಒಂದು ಬಾರಿ ಉಪಯೋಗಿಸಲಿಕ್ಕೆ 2 ಡಾಲರ್(8 Quarter ನಾಣ್ಯಗಳು) ಕೊಡಬೇಕು. ಇದನ್ನು ಒಣಗಿಸೋಕೆ ಮತ್ತೆ 2 ಡಾಲರ್(8 Quarter ನಾಣ್ಯಗಳು) ಕೊಡಬೇಕು. ಹೀಗಾಗಿ ಒಂದು ಬಾರಿ, ವಾಶಿಂಗ್ ಮಶೀನ್ ತುಂಬೋ ಅಷ್ಟು ಬಟ್ಟೆ ಹಾಕಿದರೆ ಮಾತ್ರ ನೀವು ಸ್ವಲ್ಪ ಉಳಿತಾಯ ಮಾಡಬಹುದು. ಇನ್ನು ಆಹಾರದ ವಿಷಯಕ್ಕೆ ಬಂದದ್ರೆ, ಎಲ್ಲಾ ಇಲ್ಲಿ ರೆಡಿ ಮೇಡ್ ಐಟಂ ಸಿಗುತ್ತೆ . ಅದನ್ನು ಅವರು ಶೀತಕ ಯಂತ್ರದಲ್ಲಿ(FRIDGE/REFRIGERATOR) ಇಟ್ಟಿರುತ್ತಾರೆ. ನಾವು ಅದನ್ನು ಉಪಯೋಗಿಸಲು ಅದನ್ನು ಮೈಕ್ರೋ ಓವೆನ್ ನ ಒಳಗೆ ಇಟ್ಟುಬಿಸಿ ಮಾಡ್ತೇವೆ ಅಷ್ಟೇ. ಹೀಗೆ ಬ್ರೆಡ್ ಬೇಯಿಸಲು, ಅಥವಾ ಸುಡಲು ಇನ್ನೊಂದು ಟೋಸ್ಟರ್ಅಂತ ಇದೆ. ಇನ್ನು ಪಾತ್ರೆತೊಳೆಯೋ ವಿಷಯಕ್ಕೆ ಬಂದರೆ ಡಿಶ್ ವಾಷೆರ್ಇದೆ. ಸ್ನಾನ ಮಾಡೋಕೆ ಶವರ್ ಇದೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ, ಬರಿ ಯಂತ್ರಗಳದ್ದೆ ಕೆಲಸ ಇಲ್ಲಿ. ಇನ್ನೊಂದು ವಿಷಯ ಅಂದ್ರೆ, ಇಲ್ಲಿ ಅವರವರ ಕೆಲಸ ಅವರವರು ಮಾಡಿಕೊಳ್ತಾರೆ. ಯಾರೊಬ್ಬರ ಸಹಾಯನು ಇವರು ಕೇಳಲ್ಲ. ನಿಮಗೆ ಕಾರಿನಲ್ಲಿ ಎಲ್ಲಿಗಾದರೂ ಹೋಗಬೇಕು ಅಂದರೆ, ಏನ್ ಮಾಡ್ತೀರಾ ? ಇಲ್ಲಾ ನಿಮಗೆ ರಸ್ತೆ ಗೊತ್ತಿರಬೇಕು . ಇಲ್ಲವಾದಲ್ಲಿ ಇನ್ನೊಬ್ಬರನ್ನು ಕೇಳಿ ತಿಳಿತೀರ ಅಲ್ವಾ. ಇಲ್ಲಿ ಹಾಗಲ್ಲ. ಪ್ರತಿಯೊಂದು ಕಾರಿಗೂ GPS ಅಳವಡಿಸಿದ್ದಾರೆ. ನೀವು ಮ್ಯಾಪ್ ನ ಸಹಾಯದಿಂದ ಎಲ್ಲಿಗೆ ಬೇಕಾದರು ಹೋಗಬಹುದು. ಇನ್ನು ನೀವು ಅಕಸ್ಮಾತ್ ತಪ್ಪು ರಸ್ತೆ ಯಲ್ಲಿ ಹೋದರೆ, ಅದು ನಿಮ್ಮನ್ನು ಎಚ್ಚರಿಸುತ್ತದೆ, ಹಾಗೂ ಹೊಸ ಮಾರ್ಗವನ್ನು ಕೂಡ ಸೂಚಿಸುತ್ತದೆ. ಈ GPS ನಿಮ್ಮ ಸಂಚಾರಿ ದೂರವಾಣಿಯಲ್ಲಿ ಕೂಡ ಅಳವಡಿಸಿ ಕೊಳ್ಳಬಹುದು. ಹೀಗೆ ನಿಮಗೆ ಬೇಕಾದ ಎಲ್ಲಾ ವಿಷಯಗಳು ಕೂಡ ಇಲ್ಲಿ ಕೆಲವೇ ಸೆಕೆಂಡ್ ಗಳಲ್ಲಿ ಸಿಗುತ್ತದೆ. ಅದಕ್ಕೆ ಹೇಳೋದು, ಅಮೆರಿಕ ಅಭಿವೃದ್ದಿ ಹೊಂದಿದ ದೇಶ ಎಂದು. ....ಹೀಗೆ ಇನ್ನೂ ಬೇಕಾದಷ್ಟು ಮಾಹಿತಿನ ನಾನು ನಿಮಗೆ ಒದಗಿಸ್ತೇನೆ. .....ಕಾಯುತ್ತೀರಾ ತಾನೇ.......

Saturday, June 26, 2010

ನನ್ನ ಅಮೇರಿಕಾ ಜೀವನ.........ಭಾಗ 2

ಇಲ್ಲಿನ ಕೆಲವು ವಿಷಯಗಳನ್ನು ನಿಮಗೆ ತಿಳಿಸಬೇಕು. ಇಲ್ಲಿ ಗಂಡಸರು ಮತ್ತು ಹೆಂಗಸರ ಮದ್ಯೆ ಎಲ್ಲದರಲ್ಲೂ ಪೈಪೋಟಿ. ಪ್ರತಿಯೊಂದು ತರಹದ ಕೆಲಸದಲ್ಲೂ ಮಹಿಳೆಯರು ಇಲ್ಲಿ ಎತ್ತಿದ ಕೈ. ಅದು ಟ್ಯಾಕ್ಷ್ಸಿ ಚಾಲಕರು ಆಗಬಹುದು ಅಥವಾ ಬೇರೆ ಯಾವುದಾದರು ಕೆಲಸ ಆಗಬಹುದು. ನಮ್ಮ ಹೊಟೆಲಿನಲ್ಲೇ ನೋಡಿ,5 ಜನ ಮಹಿಳೆಯರು ಇದ್ದಾರೆ(ಕೆಲಸದವರು). ಅವರು ಹೋಟೆಲಿನ ಎಲ್ಲ ಕೆಲಸವನ್ನು ಮಾಡುತ್ತಾರೆ ಜೊತೆಗೆ ಟ್ಯಾಕ್ಷ್ಸಿ ಕೂಡ ಓಡಿಸ್ತಾರೆ. ಟ್ಯಾಕ್ಷ್ಸಿ ಅಥವಾ ಕಾರು ಓಡಿಸೋದು ನೀವು ಅಂದುಕೊಂಡ ಅಷ್ಟು ಸುಲಭ ಅಲ್ಲ ಇಲ್ಲಿ. ಇಲ್ಲಿ ಬಲಗಡೆ ಗಾಡಿ ಓಡಿಸಬೇಕು. ಕಾರಿನ ಸ್ಟೀರಿಂಗ್ ಬಲಗಡೆ. ನಾವು ನಡೆದು ಓಡಾಡುವಾಗ ಕೂಡ ಈ ನಿಯಮಗಳನ್ನು ಪಾಲಿಸಬೇಕು(ಬಲಗಡೆ ಓಡಾಡೋದು). ಕಾರು ಇಲ್ಲದೆ ಇದ್ದರೆ ಜೀವನ ಬಹಳ ಕಷ್ಟ ಇಲ್ಲಿ. ಅದೂ ಚಳಿಗಾಲದಲ್ಲಿ ಆಫೀಸಿಗೆ ಹೋಗಬೇಕು ಅಂದರೆ, ಕಾರು ಇರಲೇಬೇಕು. ಹಾಗಂತ ಕಾರು ಓಡಿಸಲು ಪರವಾನಗಿ ಪಡೆಯುವುದು ಸುಲಭ ಅಲ್ಲ ಇಲ್ಲಿ. ಅದಕ್ಕಾಗಿ ಬಹಳಷ್ಟು ಪರೀಕ್ಷೆಗಳು ಇವೆ. ಮೊದಲನೇದು ಅಂದರೆ ನೀವು ಒಂದು ಪರೀಕ್ಷೆ ಬರೆಯಬೇಕು. ಇದರಲ್ಲಿ ಕನಿಷ್ಠ ಅಂದರೆ 80 ಅಂಕಗಳನ್ನು ಗಳಿಸಬೇಕು. ಆನಂತರ ನೀವು ಕಾರನ್ನು ಓಡಿಸಿ ತೋರಿಸಬೇಕು. ನಂತರ ಮುಖ್ಯವಾದದ್ದು ಅಂದರೆ ಕಾರನ್ನು ಹೇಗೆ ನಿಲ್ಲಿಸೋದು ಅನ್ನೋ ಪರೀಕ್ಷೆ. ಇದರಲ್ಲೇ ಬಹಳಷ್ಟು ಜನ ಫೇಲ್ ಆಗ್ತಾರೆ. ಅದಕ್ಕೆ ಬಹಳಷ್ಟು ಶ್ರಮ ಪಡಬೇಕು. ಇನ್ನೋದ್ ವಿಷಯ ಅಂದರೆ ಇಲ್ಲಿ ಕಾರಿಗೆ ಇರೋದೇ ಎರಡು ಗೇರ್. ಒಂದು ಮುಂದೆ ಹೋಗಕ್ಕೆ ಇನ್ನೊಂದು ಹಿಂದೆ ಹೋಗಕ್ಕೆ. ಕಾರನ್ನು ನಾವು ಬಾಡಿಗೆಗೆ ಕೂಡ ಪಡೆಯಬಹುದು, ಕೇವಲ 20-30 ಡಾಲರ್ ಆಗುತ್ತೆ ಅಷ್ಟೇ ಪ್ರತಿ ದಿನಕ್ಕೆ. ಆ ಕಾರುಗಳನ್ನು ಓಡಿಸೋದು ಏನು ಚಂದ ಅಂತೀರಾ. ಹಾಗು ಕಾರುಗಳನ್ನು ನಿಯಮಕ್ಕೆ ಅನುಗುಣ ವಾಗಿ ಓಡಿಸ್ತಾರೆ ನೋಡಿ ಅದಕ್ಕೆ ನನ್ನ ಹಾಟ್ಸ್ಆಫ್. ನಮ್ಮ ಭಾರತೀಯರು ಇವರನ್ನು ನೋಡಿ ಯಷ್ಟೋ ಕಲಿಯಬೇಕು. ಅಮೆರಿಕ ದಲ್ಲಿ ನೀವು ವಾಸಿಸೋಕೆ, ನಿಮಗೆ ಒಂದು ಮೂಲ ದಾಖಲೆ ಬೇಕು, ನೀವು ಅಮೆರಿಕ ವಾಸಿಅಂತ ಎಲ್ಲರಿಗೂ ತಿಳಿಸೋದಕ್ಕೆ. ಅದೇ Social Security Number. SSN ಎಂದು ಚಿರಪರಿಚಿತ. ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಇದು ಬೇಕೇ ಬೇಕು. ಬರೀ ಬ್ಯಾಂಕ್ ಖಾತೆ ಅಲ್ಲ, ಪ್ರತಿಯೊಂದು ಕೆಲಸಕ್ಕೂ ಇದು ಬೇಕೇ ಬೇಕು. ಇದನ್ನು ಗುಪ್ತ ವಾಗಿ ಕೂಡ ಇಟ್ಟುಕೊಳ್ಳಬೇಕು. ಅದಕ್ಕೆ, ನೀವು ಇಲ್ಲಿಗೆ ಬಂದರೆ ಮಾಡೋ ಮೊದಲನೇ ಕೆಲಸ ಅಂದರೆ ಇದೇ. ಇದು ಮೊದಲನೇ ದಿನಾನೆ ಮಾಡಕ್ಕೆ ಆಗೋಲ್ಲ. ಸ್ವಲ್ಪ ದಿನ ಅದಕ್ಕಾಗಿ ನೀವು ಕಾಯಬೇಕು.(7-10 ದಿನ) . ಇಲ್ಲಿಗೆ ಬಂದ ಮೇಲೆ ನೀವು ನೀವು ಏನೇ ಕೊಳ್ಳಲಿ, ಅಥವಾ ಖರ್ಚು ಮಾಡೋ ಹಣವನ್ನು ಭಾರತದ ರೂಪಾಯಿಗೆ ಹೋಲಿಸಲೇ ಬೇಡಿ. ಇಲ್ಲಿ ಕೆಲವಕ್ಕೆ ದುಪ್ಪಟ್ಟು ದರ ಕೊಡಬೇಕಾಗುತ್ತೆ, ಹಾಗೇನೆ ಕೆಲವಕ್ಕೆ ಸ್ವಲ್ಪ ಕಡಿಮೇನೆ. ಭಾರತದ ಆಹಾರ ಪದಾರ್ಥ ಬೇಕು ಅಂದರೆ, ಅದು ಸ್ವಲ್ಪ ಜಾಸ್ತಿನೆ. ಭಾರತದ ಪದಾರ್ಥ ಗಳು ಇಲ್ಲಿ ಎಲ್ಲ ಕಡೆ ಸಿಗೋಲ್ಲ. ಅದಕ್ಕೆ ಅಂತಾನೆ ಕೆಲವು ಅಂಗಡಿಗಳು ಇವೆ. ಇಲ್ಲಿ ಕೋಲಂಬಸ್ ನಲ್ಲಿ ಆ ತರಹದ ಅಂಗಡಿ ಇದೆ. ಅದೇ ಬಾಂಬೆ ಬಜಾರ್. ಇಲ್ಲಿ ನಮ್ಮ ಉಡುಪಿ ಇಡ್ಲಿ, ವಡೆ, ಸಾಂಬಾರ್,ಎಂ.ಟಿ.ಆರ್ ಪದಾರ್ಥಗಳು, ಹಳದಿರಾಮ್ಸ್ ರವರ ಪದಾರ್ಥಗಳು ಕಾಯಿ ಪಲ್ಯೆ ,ಮುಂತಾದವುಗಳು ಸಿಗುತ್ತವೆ. ನಾನು ಕೇವಲ ಹತ್ತು ಡಾಲರ್ ಗೆ ಒಂದು ಪ್ಯಾಕೆಟ್ ಇಡ್ಲಿ, ಸಾಂಬಾರ್, ಈರುಳ್ಳಿ ಕಾಲು ಕೆ.ಜಿ., ಕೊತ್ತಂಬರಿ, ಕರಿ ಬೇವು, ಮುಂತಾದವುಗಳನ್ನು ಕೊಳ್ಳಲು ಸಾದ್ಯ ಆಯಿತು. ಇದರಿಂದ ನಮ್ಮ ಭಾರತದ ಅಡಿಗೆಯನ್ನು ಮಾಡಿಕೊಳ್ಳಲು ಸುಲಭ ಆಗುತ್ತೆ. ಇಲ್ಲಿಗೆ ಪ್ರತಿ ಗುರುವಾರ ನಮ್ಮ ಹೋಟೆಲ್ನಿಂದ ಎಲ್ಲರೂ ಪದಾರ್ಥಗಳನ್ನು ಕೊಳ್ಳಲು ಹೋಗುತ್ತಾರೆ. ಹೋಟೆಲಿನವರೆ ಕರೆದುಕೊಂಡು ಹೋಗ್ತಾರೆ ಮತ್ತು ವಾಪಸ್ ಕರೆದುಕೊಂಡು ಬಂದು ಬಿಡ್ತಾರೆ ಕೂಡ. ಇನ್ನು ಮನೇಲಿರೋ ದೂರದರ್ಶಕ ದ ವಿಷಯಕ್ಕೆ ಬಂದರೆ, ಅದರಲ್ಲಿ ಬರೇ ಆಂಗ್ಲ ಭಾಷೆಯ ಚಾನೆಲ್ ಬಿಟ್ಟರೆ ಮತ್ತೇನು ಬರುವುದಿಲ್ಲ. ರೇಡಿಯೋ ಕೂಡ ಹಾಗೆ. ಆದರು ಕೂಡ ನಮ್ಮ ಹೋಟೆಲಿನಲ್ಲಿ ಮತ್ತು ಆಫೀಸಿನಲ್ಲಿ ನೀವು ಭಾರತದ ಹಾಗೂ ಕನ್ನಡದ ಜನರನ್ನು ಹೆಚ್ಚಾಗಿ ಕಾಣಬಹುದು. ಇಂದಿಗೆ ಇಷ್ಟು ಸಾಕು, ನಾಳೆ ಸಿಗೋಣ ಬನ್ನಿ.......

Wednesday, June 23, 2010

ನನ್ನ ಅಮೇರಿಕಾ ಜೀವನ.........ಭಾಗ 1

ರಾತ್ರಿ ಏನೋ ಮಲಗಿದೆ. ಆದ್ರೆ ಹಾಳಾದ್ದು ನಿದ್ದೆ ಬರಬೇಕಲ್ಲ. ಹೇಗೋ ಸ್ವಲ್ಪ ಹೊತ್ತು ನಿದ್ದೆ ಮಾಡಿದೆ. ಬೆಳಗ್ಗೆ ಎಂದಿನಂತೆ 6 ಗಂಟೆಗೆ ಎದ್ದೆ. ರಾತ್ರಿ ಊಟ ಬೇರೆ ಮಾಡಿಲ್ಲ ನೋಡಿ, ಹೊಟ್ಟೆ ತಾಳ ಹಾಕುತಿತ್ತು. ನನ್ನ ರೂಂ ಮೇಟ್, ಇದೆ ಸಮಯದಲ್ಲಿ ಶಾವಿಗೆ ಮಾಡುತ್ತೇನೆ ಅಂದ. ನಾನು ಸರಿ ಎಂದು ತಲೆ ಆಡಿಸಿದೆ. ಇವನು ಒಬ್ಬ ಮುಸಲ್ಮಾನ. ನಾನು ಬ್ರಾಹ್ಮಣ ಆದರೂ ಕೂಡ ಇವನು ಮಾಡಿದ ಅಡಿಗೆ ತಿನ್ನಲೇ ಬೇಕು. ಏನು ಮಾಡೋದು, ವಿಧಿ ಬರಹಾನ ಯಾರೂ ತಪ್ಪಿಸಲಿಕ್ಕೆ ಆಗೋಲ್ಲ. ನಮ್ಮ ಮನೆ ಏನು, ಅಂತ ದೊಡ್ಡದಲ್ಲ. ಇದನ್ನು ಅಮೇರಿಕಾದಲ್ಲಿ QUEEN SIZE ಹೌಸ್ ಅಂತಾ ಕರಿತಾರೆ. ಹೀಗೆ KING SIZE ಕೂಡ ಇದೆ. ಇದರಲ್ಲಿ ಒಂದೇ ರೂಮ್ನಲ್ಲಿ ಅಡಿಗೆ ಮನೆ, ಊಟ ಮಾಡೋ ಮನೆ (DINING), ಸ್ನಾನದ ಕೋಣೆ ಎಲ್ಲಾ ಇದ್ದವು. ಎಲ್ಲಾ ನಮ್ಮ ತರ ಅಲ್ಲ ಇಲ್ಲಿ. ಅಡಿಗೆ ಮನೇಲಿ ಹೋಟೆಲಿನವರೆ, ಸ್ಟೌ ಮತ್ತು ಕೆಲ ಪಾತ್ರೆ ಸಾಮಾನುಗಳನ್ನು ಕೊಟ್ಟಿದ್ದರು. ಇಲ್ಲಿ ಗ್ಯಾಸ್ ಇಲ್ಲಾ ಬಿಡಿ,ಎಲ್ಲಾವಿದ್ಯುತ್ ಒಲೆನೆ. ಇನ್ನು ಸ್ನಾನದ ಕೋಣೆಗೆ ಬಂದರೆ, ಇಲ್ಲಿ ಒಂದು ಬಾತ್ ಟಬ್ ಇದೆ, ಇದರಲ್ಲೇ ಬಿಸಿ ನೀರು, ತಣ್ಣನೆಯ ನೀರು ಬರುತ್ತೆ. ಪಕ್ಕದಲ್ಲೇ ಅಮೆರಿಕನ್ ಶೈಲಿಯ ಲೇಟ್ರಿನ್ ಕೂಡ ಇದೆ. ಮುಖ ತೊಳೆಯಲು ಒಂದು ವಾಶ್ ಬೇಸಿನ್ ಇದೆ. ಕುಳಿತುಕೊಳ್ಳಲು ಸೋಫಾ, ಮಲಗಲು ದೊಡ್ಡ ಬೆಡ್. ದೂರದರ್ಶಕ (TV) ಕೂಡ ಇದೆ. ಅವನು ಶಾವಿಗೆ ತಯಾರಿಯಲ್ಲಿದ್ದ. ನಾನು ಹೋಗಿ ಸ್ನಾನ ಮಾಡಿ ಬಂದೆ. ನಂತರ ಟೀ ಮಾಡೋಣ ಎಂದರೆ ಹಾಲು ಇಲ್ಲಾ. ಹತ್ತಿರದಲ್ಲಿ ಎಲ್ಲೂ ಸಿಗೋದು ಇಲ್ಲಾ ಎಂದು ತಿಳಿಯಿತು. ಹೇಗೋ ಅದೇ ಶಾವಿಗೆ ತಿಂದು, ಆಫೀಸ್ ಕಡೆ ಹೊರಡಲು ಅನುವಾದೆ. ಹೇಗೆ ಹೋಗೋದು ನನಗೆ ತಿಳಿದಿಲ್ಲ. ಆಗ ನನ್ನ ರೂಂ ಮೇಟ್ ಹೇಳಿದ, ಹೋಟೆಲ್ನಿಂದ ವ್ಯವಸ್ತೆ ಇದೆ ಎಂದು ತಿಳಿಸಿದ. ಅದರಲ್ಲೇ ಇಬ್ಬರು ಆಫೀಸ್ ಕಡೆ ಹೊರಟೆವು. ನಾನು ಮೊದಲು ನನ್ನ ಮೇಲ್ವಿಚಾರಕ ರನ್ನು ನೋಡ ಬೇಕಿದ್ದರಿಂದ ಆಫೀಸ್ ನ ಸ್ವಾಗತ ವಿಭಾಗಕ್ಕೆ (RECEPTION) ಗೆ ಹೋದೆ. ಇಲ್ಲಿ ನನ್ನ ಮೇಲ್ವಿಚಾರಕ ನ ಹೆಸರು ಮತ್ತು ದೂರವಾಣಿ ಯನ್ನು ಸ್ವಾಗತ ಕಾರಿಣಿಗೆ ತಿಳಿಸಿದೆ. ಆಕೆ ಕರೆ ಮಾಡಿದಳು, ಆದರೇ ನನ್ನ ದುರಾದ್ರುಷ್ಥ ಆ ಪುಣ್ಯಾತ್ಮ ಇನ್ನು ಆಫೀಸಿಗೆ ಬಂದಿರಲಿಲ್ಲ. ಆದ್ದರಿಂದ ನಾನು ಅಲ್ಲೇ ಹತ್ತಿರದಲ್ಲಿರುವ ಸೋಫಾದಲ್ಲಿ ಆಸೀನನಾದೆ. ಇಲ್ಲಿ ಇಬ್ಬರು ಸ್ವಾಗತಕಾರಿಣಿಯರಿದ್ದರು. ಒಬ್ಬಳು ಬೆಳ್ಳಗೆ ಹಾಲಿನ ತರ ಹೊಳೆಯುತ್ತ ಬಿಳಿ ಬಣ್ಣ ದವಳು ಆಗಿದ್ದರೆ , ಮತ್ತೊಬ್ಬಳು ನನಗೆ ಕಪ್ಪು ಬೆಕ್ಕನ್ನು ನೆನಪಿಸೋ ತರ ಕಪ್ಪು ಬಣ್ಣ ದವಳು ಆಗಿದ್ದಳು. ಅಮೇರಿಕಾದಲ್ಲಿ ಇದು ಸರ್ವೇ ಸಾಮಾನ್ಯ. ಇಲ್ಲಿ ಇವೆರಡು ಗುಂಪಿನ ಜನಗಳು ಇರುತ್ತಾರೆ. ಹಾಗೇನೆ ಇಲ್ಲಿ ಸಣಕಲ ಮತ್ತು ಡುಮ್ಮ ಗುಂಪಿನ ತರಹ ಎರಡೇ ತರಹದ ಜನರನ್ನು ನೀವು ನೋಡಬಹುದು. ಸ್ವಲ್ಪ ಸಮಯದ ನಂತರ ಮತ್ತೆ ಸ್ವಾಗತ ಕಾರಿಣಿಗೆ ಕರೆ ಮಾಡಲು ತಿಳಿಸಿದೆ. ಆದರೇ, ಈ ಬಾರಿ ನನ್ನ ಮೇಲ್ವಿಚಾರಕನ, ಮೇಲ್ವಿಚಾರಕನನ್ನು (My Managers manager) ಮಾತನಾಡಿಸಿದೆ. ಸ್ವಲ್ಪ ಸಮಯದ ನಂತರ ಅವರು, ತನ್ನ ಸಹೋದ್ಯೋಗಿಯನ್ನು ಕಳುಹಿಸಿದರು. ನಾನು ಅವರ ಜೊತೆ ಹೋಗಿ, ನನ್ನ ಮೇಲ್ವಿಚಾರಕನ, ಮೇಲ್ವಿಚಾರಕನನ್ನು ಭೇಟಿ ಮಾಡಿದೆ. ಅವರ ಹೆಸರು ಡೇವ್. ಹೆಸರು ಚಿಕ್ಕದು, ದೇಹ ಮಾತ್ರ ಬಾರಿ ದೊಡ್ಡದು. ಅವ್ರು ನನಗೆ ಒಂದು ಲ್ಯಾಪ್ಟಾಪ್ ಕೊಟ್ಟು ಕೆಲಸ ಮಾಡಲು ಹತ್ತಿರದಲ್ಲೇ ಇರೋ, ಸಮಾವೇಶ ಕೊಟಡಿಯಲ್ಲಿ ಕುಳಿತು ಕೊಳ್ಳಲು ಹೇಳಿದರು. ನಂತರ ನನ್ನ ಸಹೋದ್ಯೋಗಿಯಾದ ಪ್ರಶಾಂತ ರವರು ನನ್ನ ಮೇಲ್ವಿಚಾರಕನ ಜೊತೆ ಮಾತು ಕಥೆ ನಡಿಸಿ, ಅವರು ಕುಳಿತು ಕೊಳ್ಳೋ ಕಡೆ, ಒಂದು ಸ್ತಳ ಖಾಲಿ ಇದೆ ಎಂದು ತಿಳಿಸಿ, ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋದರು. ಆಗಲೇ ಸಮಯ ೧೨ ಹೊಡೆದಿತ್ತು. ಎಲ್ಲರು ಇಲ್ಲಿ ಊಟಕ್ಕೆ ಹೊರಟಿದ್ದರು. ನಾನು, ಪ್ರಶಾಂತ ಮತ್ತು ಗಿರೀಶ್ ಜೊತೆಗೂಡಿ ಹತ್ತಿರದಲ್ಲೇ ಇರೋ ಮೆಕ್ಸಿ ಕನ್ ಹೋಟೆಲಿನ ಕಡೆ ಪಯಣ ಬೆಳೆಸಿದೆವು. ಇದರ ಹೆಸರು "CHIPOTLE", ಚಿಪೋಟ್ಲೆ, ಹೇಗೆ ಬೇಕಾದರೂ ಕರೆಯಿರಿ. ಇಲ್ಲಿ ಸಸ್ಯಾಹಾರಿ ಆಹಾರ ಅಂದ್ರೆ ಬರಿತ್ಟೋ(BURITTO) ಅಂತ. ಇದು ಒಂತರ ಚಪಾತಿ ರೋಲ್. ಚಪಾತಿ ಒಳಗೆ ಸ್ವಲ್ಪ ಚಿತ್ರಾನ್ನ ಹಾಕಿ ಕೊಡ್ತಾನೆ. ಇದರ ಬೆಲೆ ಏನು ಕಡಿಮೆ ಇಲ್ಲ. ಕೇವಲ ನಾಲ್ಕು ಡಾಲರ್ ಅಷ್ಟೇ. ಹೇಗೋ ಹೊಟ್ಟೆ ಪಾಡು ನಡಿಬೇಕಲ್ಲ ಅದನ್ನೇ ಮೂವರು ತಿಂದೆವು. ಒಬ್ಬೊಬ್ಬರು ಒಂದು. ಮತ್ತೆ ವಾಪಸ್ ಆಫೀಸ್ ಗೆ ಬಂದೆವು, ನಡೆದುಕೊಂಡು. ಏನು ಕೆಲಸ ಇಲ್ಲ. ಸುಮ್ಮನೆ ಕೂತಿದ್ದೆ. ಸಂಜೆ ೫ ಗಂಟೆ ಆಯಿತು, ಎಲ್ಲರು ಆಫೀಸ್ ಗೆ ಜೂಟ್ ಹೇಳ್ತಾ ಇದಾರೆ. ಅಂದರೆ ಮನೆಗೆ ಹೊರಟರು. ನಾನು, ಗಿರೀಶ್, ಪ್ರಶಾಂತ ಕೂಡ ಮನೆಗೆ ಹೊರಡಲು ಸಿದ್ದ ಆದೆವು. ಮತ್ತೆ ಅದೇ ಹೋಟೆಲಿನ ವ್ಯಾನ್ ಬಂತು. ನಮ್ಮನ್ನು ಹೋಟೆಲಿಗೆ ಬಿಟ್ಟಿತು. ಮನೆಗೆ ಬಂದವನೇ ಅಡಿಗೆ ಶುರು ಮಾಡಿದೆ. ಅನ್ನ ಮತ್ತು ಬೇಳೆ ಸಾಂಬಾರ್ ಅದೇ ವಿದ್ಯುತ್ ಓಲೆ ಮೇಲೆ ಮಾಡಿ, ತಿಂದು ಮಲಗಿದೆ ನೋಡ್ರಿ. ಎಲ್ಲಿತ್ತೋ ಆ ನಿದ್ರೆ, ಬೆಳಗ್ಗೆ ಎದ್ದಾಗಲೇ ಗೊತ್ತಾಗಿದ್ದು......

Tuesday, June 22, 2010

ನನ್ನ ಅಮೇರಿಕಾ ಪಯಣ.........ಭಾಗ 5

ಚಿಕಾಗೋ ವಿಮಾನ ನಿಲ್ದಾಣ ಏನು, ಒಸಿ ಚಿಕ್ಕದಲ್ಲ. ಇದು ಸುಮಾರಾಗೆ ಇದೆ. ಇಲ್ಲೂ ಬಸ್, ಉಗಿ ಬಂಡಿ ಕೂಡ ಇದೆ(ವಿಮಾನ ನಿಲ್ದಾಣದ ಒಳಗೆನೆ). ಇದೇ ನನ್ನ ಮೊದಲ ಅಮೆರಿಕ ಪ್ರಯಾಣ ಮತ್ತು ಮೊದಲ ಭೇಟಿಯ ನಗರವಾದದ್ದರಿಂದ ಇಲ್ಲಿ ನನ್ನನ್ನು ತಪಾಸಣೆ ಮಾಡಿ ಮುಂದೆ, ಹೋಗಲು ಬಿಡುತ್ತಾರೆ. ಇದು ಕೆಲವರು ದೊಡ್ಡ ಮತ್ತು ಮದ್ಯಮ ಅಮೆರಿಕ ನಗರಗಳಲ್ಲಿ ಮಾತ್ರ ಮಾಡುತ್ತಾರೆ. ಪ್ರತಿಯೊಬ್ಬನಿಗೂ ಇಲ್ಲೇ ತಪಾಸಣೆ ಮಾಡಿ ಮುಂದೆ ಹೋಗಲು ಬಿಡುತ್ತಾರೆ. ಇಲ್ಲೇ ನಾನು ಅಮೆರಿಕ ದಲ್ಲಿ ಎಷ್ಟು ದಿನ ಉಳಿಯಬಹುದು ಎಂದು ನನ್ನ ಪಾಸ್ಪೋರ್ಟ್ ನಲ್ಲಿ, ಟಸ್ಸೇ ಹಾಕಿ ಮುದ್ರಿಸುತ್ತಾರೆ. (SEAL/RUBBER STAMP). ಇದಕ್ಕೋಸ್ಕರ ಮತ್ತೊಂದು ಅರ್ಜಿ(I-94) ಭರ್ತಿ ಮಾಡಿ , ಸಂದರ್ಶನ ಕ್ಕೆ ಹೋದೆನು. (Immigration Check). ಇಲ್ಲಿ ಮತ್ತೆ ಅದೇ ಪ್ರಶ್ನೋತ್ತರ ಸಮಾವೇಶ, ಚೆನ್ನೈ ನಲ್ಲಿ ನಡೆದ ತರ. ಕೊನೆಗೆ ಅಂತು ಇಂತೂ ಅಮೆರಿಕ ದಲ್ಲಿ ಒಳಗೆ ಹೋಗಲು ಬಿಟ್ರು. ಇಲ್ಲಿಂದ ನಾನು ಸ್ವಲ್ಪ ಆರಾಮಾಗಿ ಓಡಾಡಬಹುದು. ಮುಂದೆ ಕೊಲಂಬಸ್ ಗೆ ಪಯಣ, ಇಲ್ಲಿಂದ ಮುಂದೆ ಬರಿ ಅಮೆರಿಕ ವಿಮಾನಗಳು ಮಾತ್ರ ಹೋಗುತ್ತವೆ. ನಾನು ಕೂಡ ಅಮೆರಿಕನ್ ಏರ್ ಲೈನ್ಸ್ ವಿಮಾನದಲ್ಲಿ ಹೋಗಬೇಕಿತ್ತು. ಅದಕ್ಕೆ ನನ್ನ ಸಾಮಾನು ಸರಂಜಾಮು ಗಳನ್ನೂ ಬ್ರಿಟಿಶ್ ಏರ್ ವೇಸ್ ನಿಂದ ತೆಗೆದು ಅಮೆರಿಕನ್ ಏರ್ ಲೈನ್ಸ್ ವಿಮಾನಕ್ಕೆ ಸ್ತಳಾನ್ತರಿಸಿದೆ. ಮತ್ತೆ ಅದೇ ಸೆಕ್ಯೂರಿಟಿ ತಪಾಸಣೆ ನಡೆಯಿತು. ಇಲ್ಲಿಂದ ಮುಂದೆ ನನ್ನ ವಿಮಾನದ ಗೇಟ್ ಬಳಿ ಬಂದೆ. ಕೊಲಂಬಸ್ ನಲ್ಲಿ ಮಳೆ ಬರುತ್ತಿದ್ದ ಕಾರಣ, ಅಲ್ಲಿಗೆ ಹೋಗುವ ಕೊನೆಯ ವಿಮಾನ (ನಾನು ಹೋಗೋದು) ರದ್ದಾಗೋ ಪರಿಸ್ತಿತಿ ಉಂಟಾಗಿತ್ತು. ಆದರೇ ಕಾಲ ಕ್ರಮೇಣ ಮಳೆ ಕಡಿಮೆ ಆದ ಕಾರಣ ಸ್ವಲ್ಪ ತಡವಾಗಿ ವಿಮಾನ ಹೊರಡುತ್ತದೆ ಎಂದು ಘೋಷಣೆ ಮಾಡಿದರು. ಸಮಯವಿದ್ದ ಕಾರಣ ಮತ್ತೆ ನನ್ನ ಅಣ್ಣನಾದ ವೆಂಕಟೇಶನಿಗೆ ದೂರವಾಣಿ ಕರೆ ಮಾಡೋಣ ಎಂದುಅನಿಸಿತು. ನನ್ನ ಬಳಿ ಚಿಲ್ಲರೆ ಇಲ್ಲ. ಚಿಲ್ಲರೆ ಗೋಸ್ಕರ, ಒಂದು ಕಿತ್ತಳೆ ರಸದ ಸೀಸೆಯನ್ನು ಕೊಂಡು ಕೊಂಡೆನು . ಬೆಲೆ ಎಷ್ಟು ಅಂತ ಕೇಳಬೇಡಿ. ಕೇವಲ 3.5$. ಚಿಲ್ಲರೆ ಏನೋ ಸಿಕ್ತು ಆದರೇ ಕರೆ ಮಾಡಲಿಕ್ಕೆ ಮಾತ್ರ ಆಗಲಿಲ್ಲ. ಯಾರೂ ಸಹಾಯ ಮಾಡೋರು ಕೂಡ ನನಗೆ ಕಾಣಿಸಲಿಲ್ಲ. ಕೊನೆಗೆ ನಾನು ಹೊರಡೋ ವಿಮಾನದ ಗೇಟ್ ಅನ್ನು ಬದಲಾವಣೆ ಮಾಡುತ್ತಿದ್ದರು. ಹೇಗೋ ಕೊನೆಗೆ ನನ್ನ ವಿಮಾನ ಹೊರಡಲು ನಿಲ್ದಾಣಕ್ಕೆ ಬಂದಿತು. ಇದು ಬಹಳ ಚಿಕ್ಕ ವಿಮಾನ. ದೇಶೀ ವಿಮಾನ ನೋಡ್ರಿ ಅದಕ್ಕೆ. ಕೇವಲ ಒಂದು 30 ಸೀಟ್ ಗಳು ಇರಬಹುದು. ಅದರಲ್ಲಿ ಕೇವಲ 8-10 ಜನ ಮಾತ್ರ ಇದ್ದರು. ಇದು ನಮ್ಮ ಬಿ.ಎಂ. ಟಿ.ಸಿ ಬಸ್ ತರ ಅನ್ಕೊಬಹುದು. ಆದ್ರೆ ಇದರಲ್ಲಿ ಭಯ ಜಾಸ್ತಿ ಆಗುತ್ತೆ. ಇಲ್ಲಿಂದ ಕೊಲಂಬಸ್ ಕೇವಲ ಒಂದು ಗಂಟೆ ಪ್ರಯಾಣ. ಮಳೆ ಸುರಿತಾನೆ ಇದೇ. ಮೋಡಗಳನ್ನು ಭೇಧಿಸಿ, ನಮ್ಮ ವಿಮಾನದ ಕಪ್ತಾನ ನಮ್ಮನ್ನು ಕರೆದೊಯುತ್ತಿದ್ದಾರೆ. ಏನು ಗುಡುಗು,ಏನು ಮಿಂಚು ಆದರು ನಮ್ಮನ್ನ್ನು ಹುಷಾರಾಗಿ ದಡ ಸೇರಿಸಿದರು ಕಪ್ತಾನ ಸಾಹೇಬರು. ನಾನು ವಿಮಾನ ಇಳಿದಾಗ ಗಂಟೆ 12.30 ರಾತ್ರಿ, ಕೊಲಂಬಸ್ ನಲ್ಲಿ. ಇಲ್ಲಿಂದ ನನ್ನ ಸಾಮಾನು ಸರಂಜಾಮುಗಳನ್ನು ತೆಗೆದು ಕೊಂಡು, ಒಂದು ಬಾಡಿಗೆ ಕಾರಲ್ಲಿ ನನ್ನ ಹೋಟೆಲ್ ಗೆ ಹೋಗೋಣ ಎಂದು, ಅದನ್ನು ಹುಡುಕಲು ಕಾರಿನ ನಿಲ್ದಾಣಕ್ಕೆ ಬಂದೆ. ರಾತ್ರಿ ೧ ಗಂಟೆ ಆದರು ಕೂಡ ಇಲ್ಲಿ ಬೇಕಾದಷ್ಟು ಪ್ರಯಣಿಕರಿದ್ರು. ನನಗೆ ಬಾಡಿಗೆ ಕಾರು ದೊರೆಯಲು ಸ್ವಲ್ಪ ಸಮಯ ಹಿಡಿಯಿತು. ಬಾಡಿಗೆ ಕಾರು ದೊರೆತ ನಂತರ, ನನ್ನ ಹೋಟೆಲ್ ಆದ "Extended Stay Deluxe" ನ ಬಳಿ ಕರೆದೊಯ್ಯಲು ಡ್ರೈವರ್ ಗೆ ಹೇಳಿದೆ. ಅವನು ಮಳೆ ಬರುತ್ತಿದ್ದರು ಕೂಡ ನಿದಾನವಾಗಿ car ಚಲಾಯಿಸಿ, ನನ್ನನ್ನು ಹೋಟೆಲ್ ಬಳಿ ಇಳಿಸಿದನು. ಬಾಡಿಗೆ ಕಾರಿನ ದರ 40$ . ಇಲ್ಲಿಗೆ ನನ್ನ ಪ್ರಯಾಣ ಮುಗಿಯಿತು. ಇನ್ನು ಹೋಟೆಲ್ ನಲ್ಲಿ ನನ್ನ ಆಫೀಸಿನ ಸ್ನೇಹಿತರಾದ ಪ್ರಶಾಂತ್ ಮತ್ತು ಗಿರೀಶ್ ರವನ್ನು ಸಂಪರ್ಕ ಮಾಡಿ ಒಂದು ರೂಮಿನಲ್ಲಿ ಇಳಿದ್ಕೊಂಡೆ. ಈ ರೂಮಿನಲ್ಲಿ ಇದಕ್ಕೂ ಮುಂಚೆ ಖ್ವಾಜಾ ಶೈಖ್ , ಎನ್ನುವವನ ಜೊತೆ ರೂಮನ್ನು ಹಂಚಿಕೊಳ್ಳುವುದು ಎಂದು ನಿರ್ಧರಿಸಿದೆ. ಮುಂದೆ ಸ್ನಾನ ಮಾಡಿ ಮಲಗಿದ್ದಷ್ಟೇ. ನಾಳೆಯಿಂದ ಆಫೀಸ್ ಬೇರೆ ಹೋಗಬೇಕು. ಇಲ್ಲಿಗೆ ನನ್ನ ಅಮೆರಿಕಾದ ಪಯಣದ ಕಥನ ಮುಗಿಯಿತು. ಮುಂದೆ ಅಮೆರಿಕದ ಜೀವನ ಬಗ್ಗೆ ಬರಿತೇನೆ. ಕಾತುರದಿಂದ ಎದುರು ನೋಡ್ತಾ ಇರ್ತೀರಾ? ??

http://ravinrao.blogspot.com/2010/06/4.html
http://ravinrao.blogspot.com/2010/06/3.html
http://ravinrao.blogspot.com/2010/06/2.html
http://ravinrao.blogspot.com/2010/05/1.html

Sunday, June 20, 2010

ನನ್ನ ಅಮೇರಿಕಾ ಪಯಣ.........ಭಾಗ 4

ಜ್ಯೋತ್ಸ್ನಾ ಕೊಟ್ಟಳು, ಏನನ್ನ ಅಂತೀರಾ ಅವಳ ಇಮೇಲ್ ಮಾತ್ರ. ನಿಮಗೆಲ್ಲಾ ಕೊಡೋಲ್ಲಪ್ಪ. ಹಾಗೂ ಹೀಗೂ ಲಂಡನ್ ಬಂತು. ಲಂಡನ್ ನ ವಿಮಾನ ನಿಲ್ದಾಣದ ಹೆಸರು "Heathrow".(ಹೀ ಥ್ರೂ ) ಬಾರಿ ದೊಡ್ಡದು. ವಿಮಾನ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಗಳನ್ನೂ ಟರ್ಮಿನಲ್ ಎಂದು ಕರೆಯುತ್ತಾರೆ. ಒಂದು ಟರ್ಮಿನಲ್ ನಲ್ಲಿ ಎಷ್ಟು ಬೇಕಾದರು ಗೇಟ್ ಇರುತ್ತೆ. ಗೇಟ್ ಮೂಲಕ ನೆ ಒಳಗೆ ಹೋಗೋದು ಮತ್ತು ಹೊರಗೆ ಬರೋದು. ಲಂಡನ್ ನಲ್ಲಿ ಬೇಕಾದಷ್ಟು ಟರ್ಮಿನಲ್ ಗಳು ಇವೆ. ಇಲ್ಲಿ ಪ್ರಯಾಣಿಕರಿಗೆ ಏನೇ ವಿಷಯ ತಿಳಿದು ಕೊಳ್ಳಲು ಮೂಲ ಮಾರ್ಗ ಅಂದರೆ, ನೋಟಿಸ್ ಬೋರ್ಡ್ ವೀಕ್ಷಣೆ ಮಾಡುವುದು. ಹಾಗು ಬೇರೆನಾದರು ವಿಷಯ ಅಂದರೆ ವಿಮಾನದ ಹೊರಡುವ, ಬರುವ ಸಮಯ, ಟರ್ಮಿನಲ್, ಗೇಟ್ ಗಳ ಬಗ್ಗೆ ವಿಷಯ ತಿಳಿಯ ಬೇಕಿದ್ದಲ್ಲಿ ಬೇರೆ ಪ್ರಯಣಿಕರನ್ನೇ ಕೇಳಿ ತಿಳಿಯಬೇಕು. ಕಸ್ಟಮರ್ ಸರ್ವಿಸ್ ಇದೆ, ಆದ್ರೆ ಅದು ಟಿಕೆಟ್ ಬೂಕ್ಕಿಂಗ್ ಮತ್ತು ಕ್ಯಾನ್ಸೆಲ್ ಗೆ ಮಾತ್ರ. ಜ್ಯೋತ್ಸ್ನಾಮತ್ತು ನನ್ನ ಟರ್ಮಿನಲ್ ಒಂದೇ ಆದದ್ದರಿಂದ ಇಬ್ಬರು ಜೊತೇಲೆ ಹೊರಗೆ ಬಂದು ಅಡ್ಡಾ ಡಿದೆವು. ಸ್ವಲ್ಪ ಸಮಯದ ನಂತರ ಅವಳು, ಅವಳ ವಿಮಾನದ ಗೇಟ್ ತೆರೆದ ಮೇಲೆ, ವಿಮಾನವನ್ನು ಹತ್ತಲು ಹೊರಟಳು. ವಿಮಾನದ ಒಳಗೆ ಹೋಗ್ಬೇಕು ಅಂದ್ರು ಚೆಕ್ ಅಪ್ ಮಾಡ್ತಾರೆ, ಇಳಿದ ಮೇಲು ಚೆಕ್ ಅಪ್ ಮಾಡ್ತಾರೆ. ನಾನು ಅವಳನ್ನು ಬೀಳ್ಕೊಡುಗೆ ಮಾಡಿ, ನನ್ನ ಟರ್ಮಿನಲ್ ಮತ್ತು ಗೇಟ್ ಹುಡುಕಿ ಕೊಂಡು ಹೊರಟೆನು.ಅದು ಸೇರಲು, ಇಲ್ಲಿ ಉಗಿ ಬಂಡಿ ಮತ್ತು ಬಸ್ ಕೂಡ ಉಪಯೋಗಿಸ ಬೇಕಾಗಿ ಬಂತು. ಇದೆಲ್ಲ ಉಚಿತ ನೆ, ಮತ್ತು ವಿಮಾನ ನಿಲ್ದಾಣ ದ ಒಳಗೆ ಇದೆಲ್ಲ ಇದೆ. ಏನೇ ಆದರು ಲಂಡನ್ ವಿಮಾನ ನಿಲ್ದಾಣ ಮಾತ್ರ ಬಾರಿ ದೊಡ್ಡದು. ಮದ್ಯೆ ಇನ್ನು ವಿಮಾನ ಹತ್ತಲು ಸಮಯ ಇದ್ದಿದ್ದರಿಂದ, ಮನೆಗೆ ಮತ್ತು ಸ್ನೇಹಿತರಿಗೆ ದೂರವಾಣಿ ಕರೆ ಮಾಡೋಣ ಎಂದು ಮನಸ್ಸಾಯಿತು. ಆದರೇ ಲಂಡನ್ ನಲ್ಲಿ ಪೌಂಡ್ ಬೇಕು. ನನ್ನ ಹತ್ತಿರ ಡಾಲರ್ ಮತ್ತು ರೂಪಾಯಿಗಳು ಮಾತ್ರ ಇತ್ತು. ರೂಪಾಯಿಗೆ ಪೌಂಡ್ ತಕೊಳೋಣ ಅಂದ್ರೆ, ಹತ್ತಿರ ಹತ್ತಿರ 100 ರೂ ಗಳಿಗೆ ಒಂದು ಪೌಂಡ್ ಸಿಗುತ್ತೆ. ಹಾಗು ಹೀಗೂ 5 ಡಾಲರ್ ಕೊಟ್ಟು ಪೌಂಡ್ ತಕೊಂಡೆ. ಎಷ್ಟು ಸಿಕ್ತು ಗೊತ್ತಾ? ಕೇವಲ 3 ಪೌಂಡ್. ಅದರಲ್ಲಿ 1.5 ಪೌಂಡ್ ಅವನ ಕಮಿಷನ್; ಬೇರೆ. ಕೈಗೆ ಬಂದಿದ್ದು ೧.೫ ಪೌಂಡ್ ಮಾತ್ರ. ಅದನ್ನು ಉಪಯೋಗಿಸಿ ದೂರವಾಣಿ ಮಾಡೋಣ ಅಂದ್ರೆ, ಅದು ಮಾಡಕ್ಕೆ ಆಗ್ಲಿಲ್ಲ. ಹೋದರೆ ಹೋಗಲಿ ಇಂಟರ್ನೆಟ್ ಮೂಲಕ ಇ-ಮೇಲ್ ಮಾಡೋಣ ಅಂದ್ರೆ ಅದಕ್ಕೆ ಸರಿಯಾದ ಹಣ(ಕಾಯಿಂಸ್) ನಾನಾ ಬಳಿ ಇಲ್ಲ. ಹೇಗೋ ಏನು ಆಗಲಿಲ್ಲ. 5 ಡಾಲರ್ ವ್ಯರ್ಥ ಆಯಿತು. ನಂತರ ನನ್ನ ಮುಂದಿನ ಸ್ತಳವಾದ, ಚಿಕಾಗೋ ಗೆ ನನ್ನ ಪಯಣ ಬೆಳೆಸಿದೆ. ಇದು ಕೂಡ ಬ್ರಿಟಿಶ್ ಏರ್ ವೇಸ್, ವಿಮಾನ. ಈಗ ನನ್ನ ಸೀಟ್ ಅದೇ ಮೂರು ಸೀಟ್ ಗಳ ಕೊನೆಯಲ್ಲಿ ಇತ್ತು. ಆದ್ರೆ ಆ ಇಬ್ಬರು, ದಂಪತಿ ಗಳಾಗಿದ್ದರು. ಇಲ್ಲಿ ನಾನು ಪೂರ್ತಿ ಮೌನ ವಾಗಿದ್ದೆ. ಅವ್ರು ತಮಿಳು ಜನಗಳು ಬೇರೆ. ನಾನೇನು ಹೆಚ್ಚು ಮಾತಾಡಲು ಆಗಲಿಲ್ಲ. ಮತ್ತೆ ಅದೇ ಊಟ, ತಿಂಡಿ, ಹಣ್ಣಿನ ರಸ ಗಗನ ಸಖಿಯರು ಕೊಟ್ಟರು. ಈ ಬಾರಿ ನಾನು ದ್ರಾಕ್ಷಾ ರಸ ದ ಪ್ರಯತ್ನ ಮಾಡಲಿಲ್ಲ. ಈ ವಿಮಾನ ದ ಪ್ರಯಾಣ ಕೂಡ 8 ಗಂಟೆಯಾಗಿತ್ತು. ಇದಕ್ಕೂ ಮುಂಚೆ ಬೆಂಗಳೂರು-ಲಂಡನ್ ಪ್ರಯಾಣ 10 ಗಂಟೆ ತೆಗೆದುಕೊಂಡಿತ್ತು. ವಿಮಾನದಲ್ಲಿ ಮತ್ತೆ ಅದೇ ಚಲನ ಚಿತ್ರ, ರೇಡಿಯೋ ನೋಡಿದೆ. ಆದರೇ ಯಾವುದು ಒಳ್ಳೆಯದು ಇಲ್ಲವಾದ್ದರಿಂದ ಮಲಗಲು ಪ್ರಯತ್ನ ಮಾಡಿದೆ. ಆದ್ರೆ ನಿದ್ದೆ ಬರಲಿಲ್ಲ. ಹಾಗೂ ಹೀಗೂ ವಿಮಾನದಲ್ಲೇ ಇರುವ ವಿಶ್ರಾಂತಿ ಕೊಟಡಿಗೆ,ಹೋಗಿ ಬಂದು ಸಮಯ ಕಳೆದೆ. ಭಾರತದ, ಲಂಡನ್ ನ ಮತ್ತು ಚಿಕಾಗೋ ನ, ಕಾಲಮಾನ ಬೇರೆ ಯಾದ್ದರಿಂದ ನನಗೆ ಎಷ್ಟು ಸಮಯ, ಹೇಗೆ ಕಳೆಯುತ್ತದೆ, ಅನ್ನೋದೇ ಗೊತ್ತಾಗಲಿಲ್ಲ. ಅಂತು ಇಂತೂ ಚಿಕಾಗೋ ಬಂತು. ಅಮೆರಿಕ ದಲ್ಲಿ ನನ್ನ ಮೊದಲ ಬಲ ಪಾದವನ್ನು ಇಟ್ಟು ಪಾದಾರ್ಪಣೆ ಮಾಡಿದೆ. ಮುಂದೇನಾಗುತ್ತೋ ಕಾದು ನೋಡೋಣಾ........


http://ravinrao.blogspot.com/2010/06/3.html
http://ravinrao.blogspot.com/2010/06/2.html

Saturday, June 19, 2010

ನನ್ನ ಅಮೇರಿಕಾ ಪಯಣ.........ಭಾಗ 3

"Wake Up SID", ಈ ಹಿಂದಿ ಚಲನಚಿತ್ರದಲ್ಲಿ ನಟ ರಣಬೀರ್ ಕಪೂರ್ ನ ಅಭಿನಯ ಅಧ್ಭುತ ಅಂತ ಹೇಳ್ಬೇಕು. ಈತ ಹೊಸ ನಾಯಕ ನಟನಾದ್ರು, ಅಭಿನಯ ನುರಿತನ ಹಾಗೆ. ನಾನು ಇದಕ್ಕೆ ಮುಂಚೆ ಈತನ "AZAB PREM KI GAZAB KAHANI" ಚಲನಚಿತ್ರ ನೋಡಿದ್ದೇ. ಅದರಲ್ಲೂ ಇವನ ಅಭಿನಯ ಚೆನ್ನಾಗಿತ್ತು. ಹಾಗೆ ಈ ಚಲನಚಿತ್ರ ನೋಡಲು ಕೂಡ ಮನಸ್ಸಾಯಿತು. ಇನ್ನು ನಟಿ ಕೊನ್ಕೋಣಸೇನ್, ಇವಳ ಅಭಿನಯ ನಾನು "Page 3" ಮತ್ತು "Life...in a Metro" ದಲ್ಲಿ ನೋಡಿದ್ದೆ. ಅದೇ ಅಭಿನಯ ಈ ಚಿತ್ರದಲ್ಲಿ ಕೂಡ. ಚಿತ್ರದ ಬಗ್ಗೆ ಹೇಳಬೇಕು ಎಂದರೆ, ನಟ ಸಿದ್ದಾರ್ಥ್ ದೊಡ್ಡ ವ್ಯಾಪಾರಸ್ತರ ಮಗ. ಇವನಿಗೆ ತನ್ನ ತಂದೆಯ ಹಣವನ್ನು ಹೇಗೆ ಖರ್ಚು ಮಾಡೋದು ಅನ್ನೋದೇ ಗುರಿ. ಇವನ ಪದವಿ ಪರೀಕ್ಷೆ ಮುಗಿದ ಮೇಲೆ, ತಂದೆ ತನ್ನ ಕಛೇರಿಯಲ್ಲೇ ಇವನಿಗೆ ಕೆಲಸ ಮಾಡಲು ಆಹ್ವಾನಿಸುತ್ತಾರೆ. ಇವ್ನು ಒಪ್ಪಿಕೊಳ್ತಾನೆ, ಯಾವಾಗ ಗೊತ್ತಾ, ತಂದೆ ಇವನಿಗೆ ಕಾರು ಕೊಡಿಸ್ತೇನೆ ಅಂತ ಭರವಸೆ ಕೊಟ್ಟ ನಂತರ. ಇನ್ನೋದ್ ವಿಶಯ ಅಂದ್ರೆ, ಇವನಿಗೆ ಫಾರ್ಮಲ್ ಡ್ರೆಸ್ ಅಂದ್ರೆ ಆಗಲ್ಲ, ಅದೇ ಅಂಗಿ ಮತ್ತು ಪ್ಯಾಂಟ್ . ಯಾವಾಗಲೂ T-Shirt ಧರಿಸಿ ಕಚೇರಿಗೆ ಹೋಗ್ತಾ ಇರ್ತಾನೆ. ಇದು ಮತ್ತು ಕೆಲವು ಅಂಶಗಳನ್ನು ಗಮನಿಸಿದ ಇವನ ತಂದೆ, ಇವನನ್ನು ಮನೆಯಿಂದ ಹೊರಗೆ ಕಳಿಸ್ತಾರೆ. ಇವನಿಗೆ ನಟಿ ಪರಿಚಯ, ತನ್ನ ಸ್ನೇಹಿತೆಯಿಂದ ಆಗಿರುತ್ತೆ. ಇವಳನ್ನು ಅವ್ನು ಇಷ್ಟ ಪಡ್ತಿದೀನಿ ಅಂತ ಹೇಳ್ತಾನೆ. ಅವಳು ಒಪ್ಪಲ್ಲ. ಹೀಗೆ ಕಥೆ ಮುಂದುವರಿದು, ಇವ್ನು ಒಂದು ಒಳ್ಳೆ ಛಾಯಾಗ್ರಾಹಕ ಆಗತಾನೆ. ಇವ್ಳು ದಿನ ಪತ್ರಿಕೆಯ ಲೇಖಕಿ ಆಗ್ತಾಳೆ. ಇವನಿಗೆ ಕೆಲಸ ಕೊಡಿಸೋದು ಕೂಡ ನಟೀನೆ. ಹೀಗೆ ಇವ್ನು ಒಂದು ಒಳ್ಳೆ ಸಮಯ ನೋಡಿ ತನ್ನ ತಂದೆಗೆ ತನ್ನ ಬಗ್ಗೆ ತಿಳಿಸುತ್ತಾನೆ ಹಾಗೂಅವರು ಒಪ್ಪಿಕೊಂಡ ನಂತರ ತನ್ನ ಮನೆಗೆ ವಾಪಸ್ಸಾಗುತ್ತಾನೆ. ಇಷ್ಟಕ್ಕೂ ಮುಂಚೆ ನಟಿಯ ಮನೆಯಲ್ಲಿ ಟಿಕಾಣಿ ಹೂಡಿ ಅವಳನ್ನು, ಬಿಟ್ಟು ಬಂದಾಗ, ಇಬ್ಬರಿಗೂ ಸಹಜ ಪ್ರೀತಿಯಾಗಿ, ಮತ್ತೆ ಇವಳನ್ನು ಭೇಟಿಯಾಗಲು ವಾಪಸ್ಸಾಗುತ್ತಾನೆ. ಇಲ್ಲಿಗೆ ಚಲನ ಚಿತ್ರ ಮುಗಿಯಿತು. ಬೇರೆ ಇಂಗ್ಲಿಷ್ ಭಾಷೆಯ ಚಿತ್ರಗಳಾದ "ಅವತಾರ್", "How To Train your Dragon" ಕೂಡ ನೋಡಲು ಪ್ರಾರಂಭಿಸಿದೆ. ಆದರೇ ಪೂರ್ತಿ ಮಾಡಲಿಲ್ಲ. ಇನ್ನು ರೇಡಿಯೋ ಕಥೆಗೆ ಬಂದ್ರೆ, ನಾನು ಕೇಳದೆ ಇರೋ ಇಂಗ್ಲಿಷ್, ಸ್ಪಾನಿಶ್, ಜಪಾನೀಸ್ ಭಾಷೆದವು. ಅದರಲ್ಲಿ ಅಷ್ಟು ಮಜಾ ಸಿಗ್ಲಿಲ್ಲ. ಮುಂದೆ ಗಗನ ಸಖಿಯರಿಂದ ಹಣ್ಣಿನ ರಸ ಪೂರೈಕೆ. ಜ್ಯೋತ್ಸ್ನಾ ಕೆಂಪು ಬಣ್ಣದ ದ್ರಾಕ್ಷಾ ರಸ ತಗೊಂಡ್ಲು. ನಾನೇನು ಕಡಿಮೆ ಅಂತ ಅದನ್ನೇ ತಗೊಂಡೆ. ನಿಮಗೆ ಬ್ರಾಂಡಿ, ವಿಸ್ಕಿ ಕೂಡ ಇತ್ತು. ಏನುಬೇಕಾದರೂ ತಕೊಬಹುದು. ಅದರ ಜೊತೆಗೆ ಆಪಲ್ ರಸ, ಮಾವಿನ ರಸ, ಕಿತ್ತಳೆ ರಸ, ಕೋಕ್ ಕೂಡ ಇತ್ತು. ಕೆಂಪು ಬಣ್ಣದ ದ್ರಾಕ್ಷಾ ರಸ ಏಕೆ ತಕೊಂಡ್ಲು ಅಂತ ನನಗೆ ಗೊತ್ತಿಲ್ಲ,, ತಿಳ್ಕೊಬೇಕು, ಏನ್ ಮಾಡೋದು. ಇದು ಹೃದಯಕ್ಕೆ ಒಳ್ಳೇದು ಅನ್ನೋದು ನಿಮಗೆ ಗೊತ್ತಾ ? ನನಗಂತೂ ಗೊತ್ತಿರಲಿಲ್ಲ ಬಿಡಿ, ಜ್ಯೋತ್ಸ್ನಾ ಹೇಳೋ ವರೆಗೂ. ಅದರಷ್ಟು ಬೇಗ ಪ್ರಭಾವ ಬೀರುವ ಇನ್ನೊಂದು ರಸ ಇರಲ್ಲ ಬಿಡಿ. ನನಗೆ ಕುಡಿದ ಮತ್ತು ನೆತ್ತಿಗೇರಿ ಹಾಗುಹೀಗೆ ಸ್ವಲ್ಪ ಮಲ್ಕೊಂಡೆ. ಮತ್ತೆ ಎಚ್ಚರ ಆದಾಗ, ಹೀಗೆ ಮಾತು ಕಥೆ ಮುಂದುವರೆದು, ಇನ್ನೇನು ನನ್ನ ಮೊದಲ ವಿಮಾನ ಪ್ರಯಾಣ ಮುಗಿಯೋ ಸಮಯ ಬಂತು. ಅಂದರೆ ಲಂಡನ್ ಹತ್ತಿರ ಬಂತು, ನನಗೆ ಅವಳ ಫೋನ್ ಸಂಖ್ಯೆ ಅಥವಾ ವಿಳಾಸ ತಿಳಿದು ಕೊಲ್ಲಬೇಕು ಅನ್ನೋ ಕಾತುರ . ಕೇಳೆಬಿಟ್ಟೆ ಕೊನೆಗೆ, ಕೊಟ್ಳು ನೋಡಿ, ಏನನ್ನ ಅಂತೀರಾ......, ಹೇಳ್ತೀನಿ, ಇನ್ನು ಕಥೆ ಮುಗಿದಿಲ್ಲ ......ಮುಂದುವರಿತಾನೆ ಇರುತ್ತೆ.... ?
http://ravinrao.blogspot.com/2010/06/2.html
http://ravinrao.blogspot.com/2010/05/1.html

Thursday, June 17, 2010

ನನ್ನ ಅಮೆರಿಕ ಪಯಣ.........ಭಾಗ 2

ಹೀಗೆ ಮಾತು ಕಥೆ ಜ್ಯೋತ್ಸ್ನಳ ಜೊತೆ ನಡೀತಾ ಇದೆ. ಅವಳು ದೆಹಲಿ ಇಂದ ಬಂದು ಬೆಂಗಳೂರಿನಲ್ಲಿ ಮದುವೆ ಆಗಿ ನೆಲೆಸಿದ್ದಾಳೆ. ಸದ್ಯಕ್ಕೆ ಅವಳ ಮಾವ ಅತ್ತೆ ಜೊತೆ ಕಲ್ಯಾಣ ನಗರದಲ್ಲಿ ಇದಾಳೆ. ಇವಳ ಗಂಡ ನನ್ನ ತರಹ ಗಣಕ ಯಂತ್ರ ಅಭಿಯಂತರ. ನ್ಯೂ ಜರ್ಸಿ , ಅಮೇರಿಕಾದಲ್ಲಿ ಇದ್ದಾನೆ. ಎರಡು ಕಾರ್ ಬೇರೆ ಇದೆ ಯಂತೆ ಅವನ ಹತ್ತಿರ. ಈಕೆ ಹಲ್ಲಿನ ಡಾಕ್ಟರ. ಇವಳು ಅಮೇರಿಕಾದಲ್ಲಿ ಕೆಲಸ ಆ ಮಾಡೋ ಹಾಗೆ ಇಲ್ಲ. ಏಕೆ ಗೊತ್ತ, ಯಾವುದೇ ಡಾಕ್ಟರ ಪದವಿ ಅಮೆರಿಕಾದ ಹೊರಗೆ ಮಾಡಿದ್ದರೆ ಅದು ಅಮೇರಿಕಾದಲ್ಲಿ ನಿಮಗೆ ಕೆಲಸ ಸಿಗೋ ಹಾಗೆ ಮಾಡಲ್ಲ. ಅಂದರೆ ಇಲ್ಲಿನ ವರು ಅದನ್ನು ಅಂಗೀಕರಿಸುವುದಿಲ್ಲ. ಅದಕ್ಕೆ ಈಕೆ ವಿದ್ಯಾರ್ಥಿಯಾಗಿ ತನ್ನ Clinical ಉನ್ನತ ಪದವಿಯನ್ನು ಮಾಡುತ್ತಿದ್ದಾಳೆ, ಅಮೇರಿಕಾದಲ್ಲಿ. ಕೆಲವು ದಿನಗಳ ಹಿಂದೆ ಯಷ್ಟೇ ಬೆಂಗಳೂರಿಗೆ ಬಂದಿದ್ದಳು. ತನ್ನ ಅತ್ತೆ ಮಾವನನ್ನು ನೋಡಲು. ಈಗ ಹಿಂತಿರುಗುತ್ತಿದ್ದಾಳೆ. ನ್ಯೂ ಜರ್ಸಿ ಯಲ್ಲಿ ನನ್ನ ಅಣ್ಣನಾದ ವೆಂಕಟೇಶನು ಇರುವನು ಎಂದು ಅವಳಿಗೆ ತಿಳಿಸಿದೆ. ಹಾಗು ನನ್ನ ಅತ್ತಿಗೆಯಾದ ಪೂರ್ವಿ ಕೂಡ ಅವನಜೊತೆ ಇರುವಳು. ಈಕೆ ಗರ್ಭಿಣಿ ಇನ್ನೇನು ತನ್ನ ಕಂದಮ್ಮನ ನಿರೀಕ್ಷೆಯಲ್ಲಿ ಇದ್ದಾಳೆ ಎಂದು ಜ್ಯೋತ್ಸ್ನಳಿಗೆ ತಿಳಿಸಿದೆನು. ಹಾಗು ನನಗೆ ಸಮಯ ಸಿಕ್ಕಲ್ಲಿ ನ್ಯೂ ಜರ್ಸಿಗೆ ಬರುವು ದಾಗಿ ಕೂಡ ಆಕೆಗೆ ತಿಳಿಸಿದೆನು. ಈಗ ಊಟದ ಸಮಯ ಗಗನ ಸಖ ಸಖಿಯರು, ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟಗಳನ್ನು ವಿಂಗಡಿಸಿ, ಎಲ್ಲ ಪ್ರಯಾಣಿಕರಿಗೂ ಹಂಚಿದರು. ನಾನು ಮತ್ತು ಜ್ಯೋತ್ಸ್ನಾ ಸಸ್ಯಾಹಾರಿ ಊಟ ತೆಗೆದು ಕೊಂಡೆವು , ಅವಳು ಸಸ್ಯ ಹಾರಿನೆ. ಆದರೇ ಅವಳ ಗಂಡ ಸಸ್ಯಾಹಾರಿಯಿಂದ ಮಾಂಸಾಹಾರಿ ಯಾಗಿ ಪರಿವರ್ತನೆ ಆಗಿದ್ದಾನೆ ಎಂದು ತಿಳಿಸಿದಳು. ಅಮೇರಿಕಾದಲ್ಲಿ ಎಲ್ಲ ಹೀಗೆ ಆಗೋದು. ನನ್ನ ಅಣ್ಣ ವೆಂಕಟೇಶನು ಕೂಡ ಹೀಗೇನೆ. ಅವನ ಕಥೆ ಬರೆಯಲಿಕ್ಕೆ ಸ್ವಲ್ಪ ಸಮಯ ಬೇಕ್ರಪ್ಪ. ಊಟದ ಬಗ್ಗೆ ಹೇಳ್ಬೇಕು ಅಂದ್ರೆ ಚೆನ್ನಾಗೆ ಇತ್ತು. ಸ್ವಲ್ಪ ಬಿಸ್ಕೆಟ್, ಬನ್, ಚಾಕಲೇಟ್ ಇತ್ಯಾದಿ ಕೂಡ ಇತ್ತು. ಈಗ ನನ್ನ ಸೀಟ್ ನ ಮುಂದೆ ಇದ್ದ ದೂರದರ್ಶನದಲ್ಲಿ ಏನೇನು ಇದೆ ಎಂದು ವೀಕ್ಷಣೆ ಶುರುವಾಯಿತು. ಇದೆ ಮೊದಲ ಬಾರಿ ವಿಮಾನ ಪ್ರಯಾಣವಾದ್ದರಿಂದ ಇದನ್ನು ಹೇಗೆ ಉಪಯೋಗಿಸೋದು ಎಂದು ತಿಳಿದಿರಲಿಲ್ಲ. ನಂತರ ಅಭ್ಯಾಸ ಆಗಿ ಹೋಯಿತು. ಇದು ಸ್ಪರ್ಶದ ಪರದೆ. ಅಂದರೆ ನಿಮಗೆ ಇಲ್ಲಿ ಬೇಕಾದಷ್ಟು ವಿಷಯಗಳಾದ ರೇಡಿಯೋ, ಚಲನಚಿತ್ರ, ಮಾರ್ಗದ ನಕ್ಷೆ, ಹೀಗೆ ಹಲವಾರು ಇದ್ದವು. ನೀವು ನಿಮಗೆ ಬೇಕಾದ ವಿಷಯವನ್ನು ಸ್ಪರ್ಶಿಸಿ ಆಯ್ಕೆ ಮಾಡಿಕೊಳ್ಳಬೇಕು. ನಾನು ಚಲನಚಿತ್ರಕ್ಕೆ ಹೋಗಿ, ಹಿಂದಿ ಭಾಷೆಯ ಚಲನಚಿತ್ರ ದ ಆಯ್ಕೆ ಮಾಡಿದೆನು. ಇಲ್ಲಿ ಬರಿ ರಾಷ್ಟ್ರೀಯ ಭಾಷೆಗಳ ಚಲನಚಿತ್ರಗಳು ಮಾತ್ರ ಇದಾವು. ಕನ್ನಡತೆಲುಗು, ತಮಿಳು ಮುಂತಾದ ಪ್ರಾದೇಶಿಕ ಭಾಷೆಗಳ ಚಲನ ಚಿತ್ರಗಳು ಇಲ್ಲಿ ಸಿಗಲ್ಲ. ಹಾಗೇನೆ ರೇಡಿಯೋ ಕೂಡ, ಬರೀ ಇಂಗ್ಲಿಷ್, ಸ್ಪಾನಿಶ್, ಫ್ರೆಂಚ್ ಮುಂತಾದುವು ಮಾತ್ರ ಇಲ್ಲಿ ಇರುತ್ತೆ. ನಾನು ಹಿಂದಿ ಚಲನ ಚಿತ್ರ "Wake Up SID" ವೀಕ್ಷಣೆ ಪ್ರಾರಂಭ ಮಾಡಿದೆ...ಇದು ಹೇಗಿದೆ ಅಂತ ಮುಂದಿನ ಭಾಗದಲ್ಲಿ ಹೇಳ್ತೀನಿ. .....
http://ravinrao.blogspot.com/2010/05/1.html

Wednesday, June 9, 2010

PALINDROMES IN KANNADA -- ಗತಪ್ರತ್ಯಾಗತ; ಸಮಾನ ಪೂರ್ವಾಪರ; ಎಡದಿಂದ ಬಲಕ್ಕೂ, ಬಲದಿಂದ ಎಡಕ್ಕೂ ಓದಿದರೆ ಒಂದೇ ಆಗುವ-ಪದ, ಪದ್ಯ, ಸಾಲು

ಗೆಳೆಯರೇ/ಗೆಳತಿಯರೆ,
ಇಂದಿನ ಹೊಸ ವಿಷಯಕ್ಕೆ ಬರೋಣ. ಅದೇ PALINDROME . ಇದಕ್ಕೆ ಕನ್ನಡದಲ್ಲಿ ಗತಪ್ರತ್ಯಾಗತ ಎಂದು ಹೆಸರು.
ಇದು ಎಡದಿಂದ ಬಲಕ್ಕೆ ಓದಿದರೂ, ಬಲದಿಂದ ಎಡಕ್ಕೆ ಓದಿದರೂ ಆಗುವ ಒಂದೇ ಪದ. (ಹಿಂದೂ ಮುಂದಾಗಿ ಕೂಡ) ಉದಾಹರಣೆಗೆ ಇಂಗ್ಲಿಷ್ ನಲ್ಲಿ MADAM, MALAYALAM, ಹೀಗೆ ಬೇಕಾದಷ್ಟು ನೀವು ಕೇಳಿರಬಹುದು.
ಆದರೇ ನಮ್ಮದೇ ಆದ ಕನ್ನಡ ಭಾಷೆಯಲ್ಲಿ ಕೂಡ ಕೆಲವು ಇವೆ. ಅವುಗಳನ್ನು ನಾನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ. ನಿಮಗೆ ಸಿಕ್ಕರೂ ಕೂಡ ಇಲ್ಲಿ ಅದನ್ನು ಸೇರಿಸಿ. ಕಿಟಕಿ ಬಲು ಸುಲಭವಾದದ್ದು
ಮೊದಲಿಗೆ : ವಿಕಟಕವಿ --> ತುಂಬಾ ಚಿರಪರಿಚಿತವಾಗಿರೋದು.
ಎರಡನೇದು: ಕುಬೇರನಿಗೆನಿರಬೇಕು.--> ತುಂಬಾ ಹಳೆಯದು, ಬಹು ಪ್ರಸಿದ್ದವಾದದ್ದು
ಮದ್ರಾಸಿನ ಸಿದ್ರಾಮ, ಗೀತೆಯ ಕಿಟಕಿಯ ತೇಗಿ, ಮನುಜನ ಜನುಮ, ರಾಧಾನಯನಧಾರಾ, ವಿರಹದಾಹರವಿ, ವೇದವಾಕ್ಯ ವಾದವೇ, ಸದಾ ಕನಕದಾಸ, ಸರದ ಪಾದರಸ, ನವ ಜೀವನ, ಬಾರೆ ನೀರೆ ಬಾ, ಸಾಕಪ್ಪ ಕಸಾ, ವಂದೇ ದೇವಂ, ಕಟಕ, ಕನಕ, ಕಳಂಕ, ಕಾಳಿಕಾ, ಗದಗ, ಚಮಚ, ಜಲಜ, ದಕ್ಕದ, ದರ್ಪದ, ನವೀನ, ಮದ್ಯಮ, ಮುಲಾಮು, ವಾದವಾ?, ವಾದ್ಯವಾ? , ಸಮೋಸ, ಸಮಾಸ, ಸುರಿಸು, ವೇಷವೆ ?

ಹೀಗೆ ಪಟ್ಟಿ ಮಾಡ್ತಾ ಹೋದ್ರೆ, ಬೇಕಾದಷ್ಟು ಸಿಗುತ್ತೆ, ಆಲ್ವಾ ?
Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು