Tuesday, September 15, 2009

ಅಭಿಯಂತರರ ದಿನದ ಶುಭಾಶಯಗಳು -- Happy Engineers Day


ಎಲ್ಲಾ ಅಭಿಯಂತರರಿಗೂ, ಅಭಿಯಂತರರ ದಿನದ ಶುಭಾಶಯಗಳು
ದಿನಾಂಕ :
೧೫ ನೇ ಸೆಪ್ಟೆಂಬರ್ , ಅಭಿಯಂತರರ ದಿನವನ್ನು ನಾವು ಆಚರಿಸುತ್ತೇವೆ. ಏಕೆ , ಎಂದು ನಿಮಗೆ ತಿಳಿದಿದೆಯೇ ? ಇಂದು ಭಾರತ ಕಂಡ ಅತ್ಯುನ್ನತ ಅಭಿಯಂತರ ಸರ್ . ಎಂ. ವಿಶ್ವೇಶ್ವರಯ್ಯ ಅವರ ಜನ್ಮ
ದಿನ.
ಸ್ನೇಹಿತರೇ, ನಾನು ಚಿಕ್ಕಬಳ್ಳಾಪುರ ಜಿಲ್ಲೆಯವನಾದ್ದರಿಂದ, ಇಲ್ಲಿನ ಮುದ್ದೇನಹಳ್ಳಿಯಲ್ಲಿ ಜನಿಸಿದ ಸರ್.ಎಂ.ವಿ ಅವರ ಬಗ್ಗೆ ಒಂದು ಸಣ್ಣ ಲೇಖನವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಸೆಪ್ಟೆಂಬರ್ ೧೫, ೧೮೬೧ - ಏಪ್ರಿಲ್ ೧೨, ೧೯೬೨), ಸರ್ ಎಮ್‍ವಿ ಎಂದು ಜನಪ್ರಿಯರಾಗಿದ್ದ ಇವರು, ಭಾರತದ ಗಣ್ಯ ಎಂಜಿನಿಯರರಲ್ಲಿ ಒಬ್ಬರು ಮತ್ತು ಮೈಸೂರು ಸಂಸ್ಥಾನದ ದಿವಾನರಾಗಿದ್ದವರು.
ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಾಚಮ್ಮ. ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು; ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ವಿಶ್ವೇಶ್ವರಯ್ಯನವರು ಜನಿಸಿದ್ದು ಬೆಂಗಳೂರಿನಿಂದ ೪೦ ಮೈಲಿ ದೂರದಲ್ಲಿರುವ ಮುದ್ದೇನಹಳ್ಳಿಯಲ್ಲಿ. ಅವರು ೧೫ ವರ್ಷದವರಿರುವಾಗಲೆ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ೧೮೮೧ ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಬಿಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.
ವಿಶೇಶ್ವರಯ್ಯನವರು ನಂತರ ಮುಂಬೈ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು 1884 ರಲ್ಲಿ. ಇದರ ನಂತರ ಭಾರತೀಯ ನೀರಾವರಿ ಕಮಿಷನ್ ಇಂದ ಅವರಿಗೆ ಆಮಂತ್ರಣ ಬಂದಿತು. ಈ ಕಮಿಷನ್ ಅನ್ನು ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು.

ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸವೊಂದನ್ನು ಕಂಡುಹಿಡಿದು ಅದಕ್ಕಾಗಿ ಪೇಟೆಂಟ್ ಪಡೆದರು. ಮೊದಲ ಬಾರಿಗೆ1903 ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ ಖಡಕ್ವಾಸ್ಲಾ ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು ಮತ್ತು ಕರ್ನಾಟಕದ ಕೃಷ್ಣರಾಜಸಾಗರ ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು.ಕೃಷ್ಣರಾಜಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು.ವಿಶ್ವೇಶ್ವರಯ್ಯನವರು ದೇಶಾದ್ಯಂತ ಪ್ರಸಿದ್ಧರಾದದ್ದು ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ಅವರು ಏರ್ಪಡಿಸಿದಾಗ.

1908 ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಜೊತೆ ಮೈಸೂರು ರಾಜ್ಯದ ಒಟ್ಟಾರೆ ಬೆಳವಣಿಗೆಗೆ ಕೆಲಸ ಮಾಡಿದರು. 1907 ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು (ವಿಶ್ವೇಶ್ವರಯ್ಯ ಕಾಲೇಜ್ ಅಫ್ ಇಂಜಿನಿಯರಿಂಗ್). ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು.

ಅವರು ದಿವಾನರಾಗಿದ್ದಾಗ ಬ್ರಿಟಿಷ್ ಸರ್ಕಾರ ಅವರಿಗೆ "ಸರ್" ಪದವಿಯನ್ನು ನೀಡಿತು. 1955 ರಲ್ಲಿ ಭಾರತ ಸರ್ಕಾರದ ಅತ್ಯುಂತ‌ ಗೌರವವಾದ ಭಾರತ ರತ್ನ ಪ್ರಶಸ್ತಿ ಲಭಿಸಿತು. ಈಗ ಕರ್ನಾಟಕದ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜುಗಳು ಇವರ ಹೆಸರನ್ನೇ ಇಡಲಾಗುತ್ತಿದೆ.ಇವರ ಜನ್ಮ ದಿನವನ್ನು ಭಾರತದಲ್ಲಿ ಇಂಜಿನಿಯರ್ ದಿನವಾಗಿ ಆಚರಿಸಲಾಗುವುದು.

ವಿಶ್ವೇಶ್ವರಯ್ಯನವರ ಹೆಸರಿಡಲಾದ ಪ್ರಮುಖ ಸಂಸ್ಥೆಗಳು
೧. ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ.(VTU)
೨. ಮಹಾರಾಷ್ಟ್ರದ ನಾಗಪುರದಲ್ಲಿರುವ ವಿಶ್ವೇಶ್ವರಯ್ಯ ರೀಜನಲ್ ಇಂಜಿನಿಯರಿಂಗ್ ಕಾಲೇಜು (ಈಗ ವಿಶ್ವೇಶ್ವರಯ್ಯ ಇನಸ್ಟಿಟಿಟ್ಯೂಟ್ ಆಫ್ ಟೆಕ್ನಾಲೊಜಿ ಎಂದು ಹೆಸರಿಸಲಾಗಿದೆ ).(VIT)
೩. ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ.
೪. ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ಇವರ ಜನ್ಮಶತಮಾನೋತ್ಸವದ ಅಂಗವಾಗಿ ಸ್ಥಾಪಿತವಾದದ್ದು.
೫. ಯೂನಿವರ್ಸಿಟಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ, ಕೆ.ಆರ್.ಸರ್ಕಲ್, ಬೆಂಗಳೂರು-೫೬೦೦೦೧.(UVCE)
೬. ಸರ್.ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ, ಕೃಷ್ಣ ದೇವರಾಯ ನಗರ,
ಹುಣಸ ಮಾರನ ಹಳ್ಳಿ, ಬೆಂಗಳೂರು-೫೬೨೧೫೭.(Sir MVIT)
೭. ಸರ್.ಎಂ.ವಿಶ್ವೇಶ್ವರಯ್ಯ ಇನಸ್ಟಿಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ,ಅಂಗಲ್ಲು,ಮದನಪಲ್ಲಿ,ಚಿತ್ತೂರ್ ಜಿಲ್ಲೆ,ಆಂಧ್ರ ಪ್ರದೇಶ್ 517325
೮. ವಿಶ್ವೇಶ್ವರಯ್ಯ ಇನಸ್ಟಿಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಚೌಡರಪಲ್ಲಿ, ದೇವರಕದ್ರ ಮಂಡಲ್, ಮೆಹಬೂಬ್ ನಗರ,ಆಂಧ್ರ ಪ್ರದೇಶ್ 509002 .

ಇಂದೇ ಜನಿಸಿದ ನಮ್ಮ ಅಭಿಯಂತರ ಸ್ನೇಹಿತ ಶ್ರೀ ಮಂಜುನಾಥ , ಅವರಿಗೂ ಶುಭಾಶಯಗಳನ್ನು ತಿಳಿಸುತ್ತ ನನ್ನ ಲೇಖನವನ್ನು
ಮುಗಿಸುತ್ತಿದೇನೆ.
ಜೈ ಹಿಂದ್, ಜೈಕರ್ನಾಟಕ , ಜೈ ಸರ್.ಎಂ.ವಿ , ಜೈ ಅಭಿಯಂತರರಿಗೆ ....

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು