Tuesday, September 14, 2010

ನನ್ನ ಮೊದಲ ಅಮೆರಿಕ ಪ್ರವಾಸ - ನಯಾಗರ ಜಲಪಾತ ಮತ್ತು ಪಿಟ್ಟ್ಸ್ ಬರ್ಗ್-2

ನಯಾಗರ ಪ್ರವೇಶಿಸಿದ ಕೂಡಲೇ ನಾವು, ಹೋಟೆಲ್ ಗೆ ಹೊರಟೆವು. ನಾನು ಮುಂಗಡವಾಗಿಯೇ ೨ ಕೋಣೆಗಳನ್ನು ಕಾದಿರಿಸಿದ್ದೆ. ಒಂದು ನಾನು ಮತ್ತು ಪ್ರಶಾಂತ್ ಉಳಿಯಲು, ಮತ್ತೊಂದು ಗಿರೀಶ್ ದಂಪತಿಗಳಿಗೆ. ಹೋಟೆಲ್ ಜಲಪಾತದ ಸ್ತಳದಿಂದ ಹತ್ತಿರದಲ್ಲೇ ಇತ್ತು. ಅದಕ್ಕೆ ಸ್ವಲ್ಪ ದರ ಜಾಸ್ತಿ. ಬರೇ ೧೦೦ $ ಒಂದು ದಿನಕ್ಕೆ. ಅದೂ ಕೂಡ ಅಮೇರಿಕಾದಲ್ಲಿ, ಇಂದಿನ ಮದ್ಯಾನ್ಹ ೧೨ ರಿಂದ ಮುಂದಿನ ದಿನ ೧೨ ರ ವರೆಗೆ ಮಾತ್ರ. ಹೋಟೆಲ್ ನ ಒಳಗೆ ಬರೋ ಸಮಯ ಸ್ವಲ್ಪ ತಡವಾದರೂ ಪರವಾಗಿಲ್ಲ, ಬಿಟ್ಟು ಹೊರಡೋದು ಮಾತ್ರ ಮಧ್ಯಾನ್ಹ ೧೨ ಗಂಟೆಗೆ ಮಾಡಬೇಕು. ಇಲ್ಲೇ ಸ್ವಲ್ಪ ಎಡವಟ್ಟು ಕೂಡ ಆಗುತ್ತೆ. ಅಕಸ್ಮಾತ್ ಆಗಿ ನೀವು ಹೊರಗೆ ಹೋಗಿ, ಹೋಟೆಲ್ ಗೆ ಬರೋದು ಏನಾದ್ರೂ ತಡ ಆಯಿತು ಎಂದರೆ, ಮತ್ತೊಂದು ದಿನದ ಹೋಟೆಲ್ ಬಿಲ್ ಕೊಡಲು ತಯಾರಿರಬೇಕು . ನಾವು ಹೋಟೆಲ್ ನಲ್ಲಿ ರೂಂ ಗಳ ಒಳ ಹೊಕ್ಕು, ತಯಾರಾಗಿ ಜಲಪಾತದ ವೀಕ್ಷಣೆ ಮಾಡೋಣ ಎಂದು ನಿರ್ಧರಿಸಿದೆವು. ಹೋಟೆಲ್ ಗೆ ಬಂದಾಗಲೇ ಸಮಯ ಸಂಜೆ ೭ ಗಂಟೆ ಆಗಿತ್ತು. ಎಲ್ಲಾ ತಯಾರಾಗಿ ಹೊರಡೋ ಹೊತ್ತಿಗೆ ೮ ಗಂಟೆ ಆಯಿತು. ಜಲಪಾತ ಹೋಟೆಲ್ನಿಂದ ೩-೪ ಮೈಲುಗಳ ದೂರದಲ್ಲಿತ್ತು. ಅಲ್ಲಿಗೆ ಹೋಗಲು ನಮ್ಮ ಜಿ.ಪಿ.ಎಸ್ ಸಹಾಯ ತೆಗೆದು ಕೊಳ್ಳೋಣ ಎಂದರೆ, ಅದರಲ್ಲಿ ಪೋಸ್ಟ್ ಬಾಕ್ಸ್ ನಂಬರ್ ಸಮೇತ ವಿಳಾಸ ತಿಳಿಸಿದರೆ ಮಾತ್ರ ಆಗುತ್ತೆ. ಅದಕ್ಕೆ ಹೋಟೆಲ್ ನಲ್ಲಿ ನಯಾಗರ ನಗರ ನಕ್ಷೆ ತೆಗೆದು ಕೊಂಡು ಜಲಪಾತ ದ ಕಡೆ ಹೊರಟೆವು. ಹಾಗೂ ಹೀಗೂ ಜಲಪಾತದ ಹತ್ತಿರಕ್ಕೆ ಬಂದೆವು ಎಂದು ತಿಳಿದಾಗ, ಅಲ್ಲೇ ಹತ್ತಿರದಲ್ಲಿ ನಮ್ಮ ಕಾರ್ ಅನ್ನು ನಿಲ್ಲಿಸಿದೆವು. ಇದಕ್ಕೆ ೫ $ ಶುಲ್ಕ ಕೂಡ ಕೊಟ್ಟು ನಡೆದು ಕೊಂಡು ಮುಂದು ವರೆದೆವು. ದಾರಿಯಲ್ಲಿ ಮೊದಲಿಗೆ ನಮಗೆ ಪಂಜಾಬಿ ಹೋಟೆಲ್ ನ ದರ್ಶನ ಆಯಿತು. ಇದನ್ನು ಕಂಡು ಸಂತೋಷ ಪಟ್ಟು, ಮುಂದುವರೆದರೆ ನಮ್ಮ ಕಣ್ಣಿಗೆ ಬರೇ ಭಾರತದವರೇ ಕಾಣಿಸುತ್ತಿದ್ದಾರೆ. ಅದರಲ್ಲೂ ತಮಿಳು, ತೆಲುಗಿನ ಜನರು ಬಹಳಷ್ಟು. ಹಾಗೂ ಹೀಗೂ ಜಲಪಾತ ದ ದರ್ಶನ ಆಯಿತು. ದೀಪಗಳಿಂದ ಅಲಂಕೃತಗೊಂಡು ಕಂಗೊಳಿ ಸುತ್ತಿದ್ದ ಆ ನಯನ ಮನೋಹರ, ಜಲಪಾತ ದ ವೀಕ್ಷಣೆ ಬಹುಶ: ನೀವು ಎಲ್ಲಿ ಕೂಡ ಕಂಡಿರಲಿಕ್ಕಿಲ್ಲ. ಬರೇ ಬೆಳಗಿನ ಸಮಯದಲ್ಲೇ ಮುಂಚೆ ಜಲಪಾತಗಳನ್ನು ಕಂಡಿದ್ದ ನನಗೆ, ಈ ಬಾರಿ ರಾತ್ರಿಯಲ್ಲಿ ಜಲಪಾತ ಕಂಡು ಬಹಳ ಸಂತೋಷ ಆಯಿತು. ಕೆನಡಾ ದ ಭಾಗದಿಂದ ಅಮೆರಿಕನ್ ಜಲಪಾತದ ಮೇಲೆ ಬೀಳುತ್ತಿದ್ದ ಬಣ್ಣ ಬಣ್ಣದ ದೀಪಗಳಿಂದ, ಬಿಡುವ/ಬೀಳುವ ಬೆಳಕು ಕ್ಷಣ ಕ್ಷಣ ಕ್ಕೂ ಬದಲಾಗುತ್ತಿತ್ತು. ಇದನ್ನು ಚೆನ್ನಾಗಿ ಕಾಣಬೇಕಂದರೆ, ಇಲ್ಲೊಂದು ಸೇತುವೆ ಇದೆ. ನಾವು ಕೂಡ ಇದರ ಮೇಲೆ ಹತ್ತಿ ಹೋಗಿ, ವೀಕ್ಷಣೆ ಮಾಡಿದೆವು. ಇಲ್ಲಿ ಅದೆಷ್ಟು ಛಾಯಾ ಚಿತ್ರ ತೆಗೆದು ಕೊಂಡೆವು ಗೊತ್ತಿಲ್ಲ, ಆದರೇ ಹಸಿವಾಗುತ್ತಿರುವ ಕಾರಣದಿಂದ ನಮ್ಮ ಪಂಜಾಬಿ ಹೋಟೆಲ್ ನ ಕಡೆ ಹೊರಟೆವು. ಆ ಹೋಟೆಲ್ ಬೇರೆ ೧೦ ಗಂಟೆಗೆ ಮುಚ್ಚುತ್ತಾರೆ ಎಂದು ಇದಕ್ಕೂ ಮುಂಚೆನೇ ನಮಗೆ ತಿಳಿದಿತ್ತು. ಆದ್ದರಿಂದ ಬೇಗ ಹೋಟೆಲ್ ನ ಕಡೆ ಹೆಜ್ಜೆ ಹಾಕಿದೆವು. ಹೋಟೆಲ್ ನಲ್ಲಿ ಉತ್ತರ ಭಾರತದ ತಿನಿಸು ಗಳು ರಾ ರಾಜಿಸುತ್ತಿದ್ದವು. ಇಲ್ಲಿ ಬರಿ ಬಫೆ ನೆ ಇತ್ತು. ಸ್ವಯಂ ಸೇವೆಯ ಭೋಜನ. ರೋಟಿ, ದಾಲ್, ಪಾಪಡ್, ರೈತ ಹೀಗೆ ಹತ್ತಾರು ಹಲವಾರು ತಿನಿಸುಗಳು ಮೇಜಿನ ಮೇಲೆ ಇದ್ದವು. ಅವುಗಳನ್ನೆಲ್ಲ ಹೊಟ್ಟೆ ಬಿರಿಯುವ ಹಾಗೆ ತಿಂದೆವು. ಒಂದು ಬಫೆ ಬೆಲೆ ೧೩ $ ಆಗಿತ್ತು. ಆದರೇ ಊಟ ಮಾತ್ರ ತುಂಬ ಚೆನ್ನಾಗಿತ್ತು. ಅದನ್ನೇ ಹೋಟೆಲ್ ನ ಮುಕ್ಯಸ್ತನಿಗೆ ತಿಳಿಸಿದೆವು ಕೂಡ. ನಂತರ ಐಸ್ ಕ್ರೀಂ ಉಪಚಾರ, ಕುಲ್ಫಿ ಕೂಡ ಅದೇ ಹೋಟೆಲ್ ನಲ್ಲೆ ತಿಂದೆವು ಕೂಡ. ಇಲ್ಲಿಂದ ನೇರ ಕಾರು ನಿಲ್ಲಿಸಿದ್ದ ಸ್ಥಳಕ್ಕೆ ಹೊರಟು, ಅಲ್ಲಿಂದ ಮುಂದೆ ಹೋಟೆಲ್ ಗೆ ವಾಪಸ್ ಆದೆವು. ಈ ಬಾರಿd ಜಿ.ಪಿ. ಎಸ್ ನ ಸಹಾಯ ತೆಗೆದುಕೊಂಡೆವು. ಅದರಲ್ಲಿ ಮುಂಚೆನೇ ನಾನು ಹೋಟೆಲ್ ನ ವಿಳಾಸ ತುಂಬಿಸಿದ್ದೆ ನೋಡಿ. ಹೋಟೆಲ್ ಗೆ ಬಂದವರೇ ನಾಳೆ ಯಾವ ಯಾವ ಸ್ಥಳ ಗಳ ವೀಕ್ಷಣೆ ಮಾಡಬೇಕು ಎಂದು ನಿರ್ಧರಿಸಿ ನಿದ್ರಾ ದೇವಿ ಗೆ ಶರಣಾದೆವು. ಬೆಳಗ್ಗೆ ೮ ಗಂಟೆಗೆ ಎದ್ದು, ಮತ್ತೆ ಜಲಪಾತ ಕಡೆ ಹೆಜ್ಜೆ ಹಾಕಿದೆವು. ಮತ್ತೆ ಕಾರನ್ನು ನಿಲ್ಲಿಸಲು ೫ $ ಕೊಡಬೇಕಾಯಿತು. ಇಲ್ಲ್ಲಿಂದ ಜಲಪಾತ ಕಡೆ ಹೊರಟೆವು. ಈಗ ಜಲಪಾತ ಹಾಲು ಬಣ್ಣದಂತೆ ಗೋಚರಿಸುತ್ತಿತ್ತು. ಈ ಜಲಪಾತದ ನೀರಿನಲ್ಲಿ ಬಹಳ ವಿಶೇಷವಿದೆ. ಅದೆಂದರೆ ಇಲ್ಲಿ ನೀವು ಕೆಲವು ಕಡೆ ನೀಲಿ ಬಣ್ಣದ ನೀರನ್ನು ಮತ್ತು ಕೆಲವು ಕಡೆ ಹಸಿರು ಬಣ್ಣದ ನೀರನ್ನು ಕಾಣುತ್ತಿರಾ..ಇದು ಖನಿಜ ಪದಾರ್ಥಗಳ ಮಿಶ್ರಣಗಳಿಂದ ಕೂಡಿದ್ದರಿಂದ ಹೀಗೆ ಎಂದು ಅಲ್ಲಿ ತಿಳಿಸಿದ್ದರು. ಈ ಅಧ್ಬುತ ಜಲಪಾತ ದ ವೀಕ್ಷಣೆಗೆ ಇಲ್ಲಿ "Maid Of the Mist" ಎಂಬ ದೋಣಿ ಸವಾರಿ ಇದೆ. ಇದರಲ್ಲಿ ಹೊರಟರೆ ಪೂರ್ತಿ ಜಲಪಾತದ ವೀಕ್ಷಣೆ ಮಾಡಿಸುತ್ತಾ ಎಂದು ನಮಗೆ ತಿಳಿದಿತ್ತು. ೧೩.೫ $ ಕೊಟ್ಟು ಈ ದೋಣಿ ನಾವು ಹೊಕ್ಕೆವು. ಇದೊಂದು ಬಹಳ ದೊಡ್ಡ ದೋಣಿ. ಬಹಳ ವರ್ಷಗಳಿಂದ ಇಲ್ಲಿಗೆ ಬರುವ ಜನತೆಗೆ ಜಲಪಾತದ ವೀಕ್ಷಣೆ ಇದರಲ್ಲೇ ಮಾಡಿಸುತ್ತಾ ಇದ್ದಾರೆ ಅನಿಸುತ್ತೆ. ದೋಣಿಯಲ್ಲಿ ಎರಡು ಅಂತಸ್ತು ಇತ್ತು. ನಮಗೆ ಬೇಕಾದ್ದನ್ನು ಆಯ್ಕೆ ಮಾಡಿ ಕೊಂಡು ನಿಂತು ಕೊಳ್ಳ ಬಹುದಾಗಿತ್ತು. ಮೊದಲು ದೋಣಿ ಹತ್ತಿದವರು ಮೇಲ್ಭಾಗದಲ್ಲಿ ನಿಂತರು. ನಾವು ಮೇಲೆ ನಿಲ್ಲಲು ಜಾಗವಿಲ್ಲವಾದ ಕಾರಣ ದಿಂದ ಕೆಳಗೆ ನಿಲ್ಲ ಬೇಕಾಯಿತು. ಇನ್ನೇನು ದೋಣಿ ತುಂಬಿತು, ಆಗ ದೋಣಿ ಜಲಪಾತಕ್ಕೆ ನಮ್ಮನ್ನು ಕರೆದೊಯ್ಯಿತು. ಇಷ್ಟು ಹೊತ್ತು ಬರೇ ಅಮೆರಿಕನ್ ಜಲಪಾತ ಕಂಡು ಬೇಸರವಾಗಿದ್ದ ನಮಗೆ, ಕೆನಡ ದ ಜಲಪಾತ ಕಂಡು ಇನ್ನೂ ಸಂತೋಷವಾಯಿತು. ಸುಮಾರು ಇಪ್ಪತ್ತು ನಿಮಿಷಗಳ ಈ ದೋಣಿ ಸಂಚಾರ ಅದ್ಭುತ ವಾಗಿತ್ತು. ಇದು ಮುಗಿದ ನಂತರ ಅಮೆರಿಕನ್ ಜಲಪಾತದ ಹತ್ತಿರ ಹೋಗಲು ಸ್ವಲ್ಪ ದಾರಿ ಮಾಡಿದ್ದರು. ಅಲ್ಲಿಗೆ ಹೋಗಿ ಸ್ವಲ್ಪ ಸಮಯ ನೀರಿನಲ್ಲಿ ನೆನೆದೆವು. ಇಲ್ಲಿಂದ ವಾಪಸ್ನಗರದ ಕಡೆ ಪಯಣ, ಹಸಿವಾಗುತಿತ್ತು ನೋಡಿ, ಅದಕ್ಕೆ. ಈ ಬಾರಿ ಮತ್ತೊಂದು ಭಾರತದ ಹೋಟೆಲ್ ಹೊಕ್ಕೆವು. ಇಲ್ಲಿ ಇಡ್ಲಿ, ಮಸಾಲೆ ದೋಸೆ, ಚನ್ನಾ ಬತುರ, ಪರೋಟ, ಪಾವ್ ಬಾಜಿ ಎಲ್ಲಾ ರುಚಿ ನೋಡಿದೆವು. ನಾನು ಮಾತ್ರ ಅಮೇರಿಕಾದಲ್ಲಿ ಮೊತ್ತ ಮೊದಲಿಗೆ ತಿಂಡಿ ತಿಂದಿದ್ದು ಇದೆ ದಿನವಾಗಿತ್ತು. ಸಮಯ ೧೧.೩೦- ೧೨ ಆಗಿತ್ತು, ಇದನ್ನು ತಿಂಡಿ ಅಂತ ಕರೆಯೋಕೆ ಆಗಲ್ಲ, ಆದರು, ಇಡ್ಲಿ ದೋಸೆ ತಿಂದೆನಲ್ಲ ಅದಕ್ಕೆ ಇದು ತಿಂಡಿ ನೆ. ತಿಂಡಿ ಮುಗಿದ ನಂತರ ಮತ್ತೆ ಜಲಪಾತದ ಕಡೆ ಪಯಣ. ಈ ಬಾರಿ ಕಾಲ್ನಡಿಗೆಯಲ್ಲಿ ಇಲ್ಲೇ ಇರುವ ಮೇಕೆ ದ್ವೀಪಕ್ಕೆ ಪಯಣ. ಈ ದ್ವೀಪಕ್ಕೆ ಕಾಲ್ನಡಿಗೆಯಲ್ಲಿ ಹೋಗಲು ಒಂದು ಸೇತುವೆ ಇದೆ. ಅಷ್ಟೇನೂ ದೊಡ್ಡದಲ್ಲದ ಈ ದ್ವೀಪದಲ್ಲಿ, ಕೆನಡಾ ಜಲಪಾತ ಮತ್ತು ಬ್ರೈಡಲ್ ಜಲಪಾತ ದ ವೀಕ್ಷಣೆ ಮಾಡಬಹುದು. ಇಲ್ಲಿಯೂ ಕೂಡ ಕೆಲವು ಛಾಯಾ ಚಿತ್ರಗಳನ್ನು ತೆಗೆದುಕೊಂಡೆವು. ನಂತರ, ನಯಾಗರ ಉದ್ಯಾನ ನೋಡಲು ಒಂದು ಬಸ್ ಇತ್ತು. ಅದರಲ್ಲಿ ೧.೫ $ ಕೊಟ್ಟು ಕುಳಿತೆವು. ಈ ಬಸ್ಸಿನಲ್ಲಿ ನಯಾಗರದ ಬಗ್ಗೆ ಪೂರ್ತಿ ವಿವರಣೆಯನ್ನು ತಿಳಿಸಿದರು. ಈ ಬಸ್ಸು ನಾವು ನೋಡಿದ, ನೋಡದೆ ಇರದ ಸ್ಥಳಗಳಲ್ಲಿ ನಿಲ್ಲಿಸಿ, ಪ್ರತಿಯೊಂದರ ಬಗ್ಗೆ ವಿವರಣೆ ತಿಳಿಸಿದರು. ಎಲ್ಲಾ ಸ್ಥಳಗಳು ಮುಗಿದ ಮೇಲೆ, ಸಮಯ ೩ ಗಂಟೆ ಯಾಗಿತ್ತು. ಊಟದ ಸಮಯ ಹತ್ತಿರವಾಗಿತ್ತು. ಮತ್ತೆ ನಿನ್ನೆಯ ಪಂಜಾಬಿ ಹೋಟೆಲ್ನಲ್ಲಿ ಊಟ ಮಾಡಿ ಕೊಲಂ ಬಸ್ ನ ಕಡೆ ಪ್ರಯಾಣ ಬೆಳೆಸಿದೆವು. ಮನೆ ಸೇರಿದಾಗ ೧೦.೩೦ ಆಗಿತ್ತು. ಗಿರೀಶ್ ನಮ್ಮನ್ನು ಮನೆ ಹತ್ತಿರ ಇಳಿಸಿ ಕಾರು ಅವರ ಹೋಟೆಲ್ ನ ಕಡೆ ತೆಗೆದು ಕೊಂಡು ಹೊರಟರು. ಇಲ್ಲಿಗೆ ನಮ್ಮ ನಯಾಗರ ಪ್ರಯಾಣ ಮುಗಿಯಿತು.

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು