Thursday, September 2, 2010

ನನ್ನ ಮೊದಲ ಅಮೆರಿಕ ಪ್ರವಾಸ - ನಯಾಗರ ಜಲಪಾತ ಮತ್ತು ಪಿಟ್ಟ್ಸ್ ಬರ್ಗ್-1

ಮಿತ್ರರೇ,
ಅಮೆರಿಕ ಎಂದ ಕೂಡಲೆ ನೆನಪಾಗುವುದು ನ್ಯೂ ಯಾರ್ಕ್ ನಗರ. ಹಾಗೇನೆ ಇದು ಅಮೆರಿಕ ದ ಮುಖ್ಯ ಪ್ರವಾಸಿ ತಾಣ ಕೂಡ. ಇದನ್ನು ಅಮೆರಿಕಕ್ಕೆ ಬಂದ ಪ್ರತಿಯೊಬ್ಬರೂ ನೋಡಲೇ ಬಯಸುತ್ತಾರೆ. ಅದುವೇ ನಯಾಗರ ಜಲಪಾತ. ಇಲ್ಲಿಗೆ ನಾನು ಮತ್ತು ನನ್ನ ಸ್ನೇಹಿತರು, ನಮ್ಮ ಅಮೆರಿಕಾದ ಮೊದಲ ಪ್ರವಾಸ ಮಾಡಿದೆವು. ನಿಮಗೆ ತಿಳಿದಿದೆಯೋ ಇಲ್ಲವೋ, ನಯಾಗರ ಜಲಪಾತ ಎರಡು ದೇಶಗಳಲ್ಲಿ ಹರಡಿಕೊಂಡಿದೆ. ಅದೇ ಅಮೆರಿಕ ಮತ್ತು ಕೆನಡಾ ದೇಶಗಳು. ಜಲಪಾತದ ಒಂದು ಭಾಗದಲ್ಲಿ ಅಮೆರಿಕ, ಮತ್ತೊಂದು ಭಾಗದಲ್ಲಿ ಕೆನಡಾ. ಇವೆರಡರ ಮದ್ಯೆ ನಯಾಗರ ನದಿ ಇದೆ. ಇನ್ನೊಂದು ತರಹ ಹೇಳಬೇಕೆಂದರೆ ಅಮೆರಿಕಾದ ಈರೀ ಸರೋವರ ಮತ್ತು ಕೆನಡಾ ದ ಒಂಟಾರಿಯೋ ಸರೋವಗಳ ಮದ್ಯೆ ಇರುವ ಸಣ್ಣ ನಯಾಗರ ನದಿ, ಒಂದು ಜಲಪಾತವನ್ನು ಸೃಷ್ಟಿಸಿರುವುದೇ ಸೋಜಿಗ.ನಯಾಗರ ನದಿಯ ಪಶ್ಚಿಮ ಭಾಗದಲ್ಲಿ ಕೆನಡ ಇದ್ದರೆ, ಪೂರ್ವದಲ್ಲಿ ಅಮೆರಿಕ ಇದೆ. ನಯಾಗರ ಊರಿನ ಕೇಂದ್ರ ಬಿಂದು ಎಂದರೆ ನಯಾಗರ ಜಲಪಾತ. ನಮ್ಮ ಜೋಗ್ ಜಲಪಾತದ ರಾಜ, ರಾಣಿ, ರೋರೆರ್, ರಾಕೆಟ್ ತರ ನಯಾಗರ ಜಲಪಾತ ಕೂಡ ಮೂರು ಜಲಪಾತಗಳನ್ನು ಒಳಗೊಂಡಿದೆ. ಅವೇ ಅಮೆರಿಕನ್ ಜಲಪಾತ(American), ಬ್ರೈಡಲ್(Bridal) ಜಲಪಾತ, ಮತ್ತು ಕೆನಡಿಯನ್ / ಕುದುರೆ ಬೂಟಿನ ಜಲಪಾತ (Horse Shoe). ಇದರಲ್ಲಿ ಮುಖ್ಯವಾದದ್ದು ಕೆನಡಿಯನ್ ಜಲಪಾತ. ನಯಾಗರ ಜಲಪಾತದ ೯೦% ನೀರು ಇದರಲ್ಲೇ ಹರಿಯುತ್ತದೆ. ಇದನ್ನು ಪೂರ್ತಿಯಾಗಿ ಅಮೆರಿಕಾದ ಭಾಗದಿಂದ ನೋಡಲು ಆಗುವುದಿಲ್ಲ. ಇನ್ನು ಉಳಿದ ೧೦% ಅಮೆರಿಕನ್ ಜಲಪಾತದಲ್ಲಿ. ನಯಾಗರ ಜಲಪಾತ ದ ಎತ್ತರ ನಮ್ಮ ಜೋಗ್ ಜಲಪಾತ ಕ್ಕಿಂತ ಕಡಿಮೇನೆ. ಸುಮಾರು ೨೦೦ ಅಡಿ ಇರಬಹುದು ಅಷ್ಟೇ. ಮತ್ತೆ ಇದು ಏಕೆ ಇಷ್ಟೊಂದು ಪ್ರಸಿದ್ದಿ ಅಂತ ಕೇಳ್ತೀರಾ? ಇದರ ಅಗಲ ಇದೆ ನೋಡಿ, ಅಪಾರ ಗಾಂಭೀರ್ಯ ತಂದು ಕೊಡುತ್ತದೆ.
ಇನ್ನು ಇಲ್ಲಿಗೆ ಹೋಗುವ ಮುಂಚೆ ಪಿಟ್ಟ್ಸ್ ಬರ್ಗ್ (Pittsburgh) ನ ವೆಂಕಟೇಶ್ವರ ನ ದರ್ಶನ ಕೂಡ ಮಾಡಿ ಹೋಗೋಣ ಅನಿಸಿತ್ತು. ಅದಕ್ಕೆ ನಮ್ಮ ಪ್ರವಾಸದಲ್ಲಿ ಇದನ್ನು ಸೇರಿಸಿಕೊಂಡೆವು. ವೆಂಕಟೇಶ್ವರ ಎಷ್ಟು ಪ್ರಸಿದ್ದ ಅಂತ ಎಲ್ಲರಿಗೂ ಗೊತ್ತೇ ಇದೆ. ಅದೇ ತಿರುಪತಿಯ ಏಳು ಬೆಟ್ಟಗಳ ಮೇಲೆ ಆಸೀನನಾಗಿರುವ ವೆಂಕಟೇಶ್ವರ/ ಬಾಲಾಜಿ/ ಶ್ರೀನಿವಾಸ/ ಗೋವಿಂದಾ, ಬರೀ ರೂಪಾಯಿ ಲೆಕ್ಕ ಮಾಡಿಸುತ್ತಾನೆ/ಎಣಿಸುತ್ತಾನೆ. ಪಿಟ್ಟ್ಸ್ ಬರ್ಗ್ (Pittsburgh) ನ ವೆಂಕಟೇಶ್ವರ ಡಾಲರ್ ನ ಲೆಕ್ಕ ಮಾಡಿಸುತ್ತಾನೆ/ಎಣಿಸುತ್ತಾನೆ. ಇಲ್ಲಿ ಕೂಡ ವೆಂಕಟೇಶ್ವರ, ಪೆನ್ನಿ ಬೆಟ್ಟದ(Pennysylvania Hills) ಮೇಲೆ ಆಸೀನನಾಗಿದ್ದಾನೆ. ಅಮೆರಿಕಾದ ಮೊಟ್ಟಮೊದಲ ಭಾರತೀಯ ದೇವಸ್ತಾನ ಅಂದರೆ ಇದೇನೇ. 1976 ರಲ್ಲಿ ನಿರ್ಮಾಣಗೊಂಡ ದೇವಸ್ತಾನ ಅಮೆರಿಕಾದ ಹಿಂದೂ ಭಕ್ತರನ್ನು ಕಾಪಾಡುತ್ತಿದ್ದಾನೆ. ಇಂತಹ ಅಮೂಲ್ಯ ಸ್ಥಳಗಳಿಗೆ ನಮ್ಮ ಪ್ರವಾಸ ಕೈ ಗೊಂಡೆವು. ಮೊದಲು ನಿಶ್ಚಯಿಸಿದಂತೆ ಶನಿವಾರ ಹೊತ್ತಿಗೆ ಮುಂಚೆ ಹೊರಟು, ಭಾನುವಾರ ಸಂಜೆ/ ರಾತ್ರಿ ವಾಪಾಸಾಗುವುದು ಎಂದಿತ್ತು. ಆದರೇ ಹೊರಟಿದ್ದು ಮಾತ್ರ ಶನಿವಾರ ಬೆಳಗ್ಗೆ ೭ ಗಂಟೆ ೩೦ ನಿಮಿಷಕ್ಕೆ. ಇದಕ್ಕೂ ಮುಂಚೆನೇ ಗಿರೀಶ್ ಮತ್ತು ಪ್ರಶಾಂತ ಅವರು ಶುಕ್ರ ವಾರ ಸಂಜೆನೇ ಕಾರನ್ನು ಬಾಡಿಗೆಗೆ ಪಡೆದು ತಂದಿದ್ದರು. ಇಲ್ಲೇ ನಮಗೆ ಅದೃಷ್ಟ ಒಲಿದಿತ್ತು. ಅದೆಂದರೆ, ನಾವು ಕಾಯ್ದಿರಿಸಿದ್ದ Compact ಕಾರಿನ ಬದಲು, ನಮಗೆ Standard ಕಾರು ದೊರೆತಿತ್ತು. ಟೊಯೋಟ ಸಂಸ್ತೆಯ ಕ್ಯಾಮ್ರಿ (Toyota Camry) ಕಾರು ಬಹಳ ವಿಶಾಲವಾಗಿತ್ತು. ಇದರಲ್ಲಿ ನಾವು ನಾಲ್ಕೂ ಜನ (ರವಿ, ಪ್ರಶಾಂತ , ಗಿರೀಶ್, & ಗಿರೀಶ್ ರವರ ಪತ್ನಿ ) ಆರಾಮಾಗಿ ಕುಳಿತುಕೊಳ್ಳ ಬಹುದಾಗಿತ್ತು. ಕಾರಿನ ಬಣ್ಣ ಕಪ್ಪು. ಇಲ್ಲಿಂದ ನಾವು ಗ್ಯಾಸ್ ತುಂಬಿಸಿ I 71 S ರ ಮೂಲಕ ಪಿಟ್ಟ್ಸ್ ಬರ್ಗ್ ಗೆ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ಕೊಲಂಬಸ್ ನಿಂದ ಪಿಟ್ಟ್ಸ್ ಬರ್ಗ್ ನ ದೂರ ಸರಿ ಸುಮಾರು ೨೦೦ ಮೈಲುಗಳು. ಒಂದು ಅಂದಾಜಿನ ಪ್ರಕಾರ ೩ ರಿಂದ ೩.೩೦ ಗಂಟೆ ಪ್ರಯಾಣ. ಸಮಯ ೯ ತಲುಪಿದಾಗ ನಾವು ಓಹಿಯೋ(Ohio,(OH)) ರಾಜ್ಯ ಬಿಟ್ಟು ಪೆನ್ನಿ ಸಿಲ್ ವೇನಿಯಾ (Pennsylvania,(PA)) ರಾಜ್ಯ ಪ್ರವೇಶಿಸಿದೆವು. ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಶ್ರಮಿಸಿಕೊಳ್ಳುವ ಜಾಗಗಳು(Rest Area) ಇರುತ್ತವೆ. ಇಲ್ಲಿ, ನಿಮಗೆ ಆಯಾ ರಾಜ್ಯದ ಪ್ರವಾಸದ ಮಾಹಿತಿ ಸಿಗುತ್ತದೆ. ಹಾಗು, ಕುಡಿಯಲು ತಂಪಾದ ಪಾನೀಯ ಕೂಡ ಸಿಗುತ್ತದೆ. ನಾವು ೯.೧೫ ಕ್ಕೆ PA ದಣಿವು ಆರಿಸಿಕೊಳ್ಳುವುದಕ್ಕೆ ವಿಶ್ರಮಿಸಿದೆವು. ಇಲ್ಲಿಂದಲೇ ನಮ್ಮ ಮೊದಲ ಛಾಯಾ ಚಿತ್ರದ ಕಲಾಪ ಶುರುವಾಯಿತು. ಇಲ್ಲೇ ನಮ್ಮ ಕಾರಿನ ಚಾಲಕರು ಕೂಡ ಬದಲಾದರು. ಇದಕ್ಕೂ ಮುಂಚೆ ತಿಳಿಸಿದ ಹಾಗೆ ಗಿರೀಶ್ ರವರು, ಚಾಲನೆ ಮಾಡುತ್ತಿದ್ದರು. ಈಗ ಪ್ರಶಾಂತ್ ರವರ ಸರದಿ. ಇವರಿಗೆ ಭಾರತದಲ್ಲಿ ವಾಹನ ಚಾಲನೆ ಮಾಡಿ ಅನುಭವ ಇದೆ. ಹಾಗು ಅಮೆರಿಕ ದಲ್ಲಿ ಒಂದು ಅವಕಾಶಕ್ಕೆ ಕಾಯುತ್ತಿದ್ದರು. ಈಗ ಆ ಸಕಾಲ ಕೂಡಿ ಬಂದಿತ್ತು. ಗಿರೀಶ್ ರವರ ಮಾರ್ಗ ದರ್ಶನದಲ್ಲಿ, ಇವರು ಕೂಡ ಸ್ವಲ್ಪ ಸಮಯದಲ್ಲೇ ಅಮೆರಿಕಾದ ಕಾರು ಚಾಲನೆಗೆ ಮುನ್ನುಡಿ ಬರೆದರು. ೯.೩೦ ಕ್ಕೆ ಇಲ್ಲಿಂದ ಹೋರಾಟ ನಾವು, I 70 E ರ ಮುಖಾಂತರ ನಮ್ಮ ಪ್ರಯಾಣ ಮುಂದು ವರೆಸಿದೆವು. ರಾಷ್ಟ್ರೀಯ ಹೆದ್ದಾರಿ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ. ಇದರ ಬಗ್ಗೆ ಹಿಂದೇನೆ ಹೇಳಿದ್ದೇನೆ. ಆದರೇ ನಿಗದಿ ಪಡಿಸಿದ ವೇಗ ೬೫ mph,ಅನ್ನು ಅನುಸರಿಸೋದೆ ಸ್ವಲ್ಪ ಕಷ್ಟ ಅನಿಸುತ್ತದೆ. ಭಾರತದಲ್ಲಿ ಈ ತರಹ ಯಾವುದೇ ವೇಗ ನಿಗದಿ ಪಡಿಸಿಲ್ಲ. ನೀವು ನಿದಾನಕ್ಕೆ/ಜೋರಾಗಿ ಹೋಗಿ ಯಾರೂ ನಿಮ್ಮನ್ನು ಕೇಳುವುದಿಲ್ಲ. ಆದರೇ. ಅಮೇರಿಕಾದಲ್ಲಿ ಕಾಪ್ಸ್ (Police) ನಿಮ್ಮನ್ನು ಹುಡುಕಿ ಕೊಂಡು ಬರುತ್ತಾರೆ. ಅವರು ನಿಮಗೆ ಟಿಕೆಟ್ (Not Confuse with Bus/Train/Flight ) ಕೊಡುತ್ತಾರೆ. ಇದು ನಿಮ್ಮ ವಾಹನ ಪರವಾನಗಿ ಮೇಲೆ ಪ್ರಭಾವ ಬೀರುತ್ತದೆ. ಮಾರ್ಗ ಮದ್ಯೆ ಕಾರು ಪಂಚರ್ ಆಗಿದೆ ಎಂದು ಅನಿಸಿತು. ಅದಕ್ಕೆ ರಸ್ತೆಯಲ್ಲೇ ತುರ್ತು ಪರಿಸ್ತಿತಿ ಲೇನ್ ನಲ್ಲಿ ನಿಲ್ಲಿಸಿದೆವು. ನೋಡಿದರೆ ಏನು ಆಗಿಲ್ಲ. ರಸ್ತೆ ಲೋಹದಿಂದ ಮಾಡಿದ್ದರಿಂದ ನಮಗೆ ಆ ತರಹ ಭಾಸವಾಗಿರಬೇಕು ಅನಿಸಿ, ಚಾಲಕನ ಬದಲಾವಣೆ ಮಾಡಿ, ಪ್ರಯಾಣ ಮುಂದುವರೆಸಿದೆವು. ಸುಮಾರು ೧೧ ಗಂಟೆಗೆ ಪಿಟ್ಟ್ಸ್ ಬರ್ಗ್ ನಗರ ಪ್ರವೇಶಿಸಿ, ೧೧.೩೦ ಕ್ಕೆ ದೇವಾಲಯ ದ ಬಳಿ ಸೇರಿದೆವು. ಕೈ ಕಾಲು ಮುಖ ತೊಳೆದು A.C. ನಲ್ಲಿ ಆಸಿನನಾಗಿರುವ ಡಾಲರ್ ವೆಂಕಟೇಶ್ವರನ ದರ್ಶನ ಮಾಡಿದೆವು. ಇದು ಹಿಂದೂ ದೇವಾಲಯವಾದ್ದರಿಂದ ಬರೇ ನಮ್ಮ ಭಾರತದವರನ್ನು ಸುತ್ತಲೂ ಕಾಣುತ್ತಿದ್ದೆವು.ಹೊಟ್ಟೆ ಬಾರಿ ಹಸಿದಿತ್ತು. ದೇವಾಲಯದಲ್ಲೇ ಪ್ರಸಾದದ ತರಹ ಊಟದ ವ್ಯವಸ್ತೆ ಇತ್ತು. ಉಚಿತವಾಗಿ ಅಲ್ಲ ಸ್ವಾಮೀ, ೨ ಡಾಲರ್ ಒಂದು Bowl/Plate ಗೆ. ಬಹಳ ತರಹದ ಆಹಾರ ಪದಾರ್ಥಗಳು ಇಲ್ಲಿ ಇತ್ತು. ನಾವು, ಎಲ್ಲವನ್ನು ಒಂದೊಂದು Bowl/Plate ತೆಗೆದುಕೊಂಡೆವು. ಸಾಂಬಾರ್ ರೈಸ್, ಪುಳಿಯೋಗರೆ, ಮೊಸರನ್ನ, ಪೊಂಗಲ್ ಎಲ್ಲ ಚೆನ್ನಾಗಿತ್ತು. ಇಲ್ಲಿನ ಒಂದೇ ವಿಚಾರ ನನಗೆ ಸರಿ ಅನಿಸದಿದ್ದ್ದು ಅಂದರೆ, ಅಮೆರಿಕ ದೇಶದ ಪ್ರಜೆ ಒಬ್ಬ ಸ್ವಚ್ಛ ಮಾಡುತ್ತಿದ್ದುದು, ಈತನನ್ನು ದೇವಾಲಯದವರು ಆಳಾಗಿ ನೋಡುತ್ತಿದುದು ಕೂಡ(I Mean Cleaner in Temple Restaurant). ಊಟ ಮುಗಿದ ನಂತರ ದೇವಸ್ತಾನದ ಬಳಿ ಕೆಲವು ಛಾಯಾ ಚಿತ್ರಗಳನ್ನು ತೆಗೆದು ಕೊಂಡು ಸಮಯ ೧.೧೫ ಆದಾಗ, ನಮ್ಮ ಮುಂದಿನ ಸ್ತಳ ಆತ್ಮಹತ್ಯೆಯ ಮೊನಚಾದ ತುದಿಗೆ(Suicide Point) ಮುಂದುವರೆಸಿದೆವು. ಇಲ್ಲಿಗೆ ಸೇರಲು ನಾವು ಹಲವಾರು ಸುರಂಗಗಳನ್ನು ಮತ್ತು ಸಂಪರ್ಕ ಸೇತುವೆಗಳನ್ನು ಉಪಯೋಗಿಸಿದೆವು. ಈ ಸ್ಥಳ ದಿಂದ ಪಿಟ್ಟ್ಸ್ ಬರ್ಗ್ ನ ಡೌನ್ ಟೌನ್ , ತುಂಬಾ ಚೆನ್ನಾಗಿ ಕಾಣುತ್ತದೆ. ಪಿಟ್ಟ್ಸ್ ಬರ್ಗ್ ನಗರ ವನ್ನು, ಬೆಟ್ಟಗಳನ್ನು ಕೊರೆದು ಮಾಡಿದ್ದಾರೆ. ಎರಡು ಬೆಟ್ಟಗಳ ಮದ್ಯೆ ನೀರಿದೆ ನೋಡಿ, ಅದೇ ಕಷ್ಟ. ಸೇತುವೆ ಗಳ್ಳನ್ನು ಉಪಯೋಗಿಸಿ, ಎರಡು ಬೆಟ್ಟಗಳ ಸಂಪರ್ಕ ಮಾಡಿದ್ದಾರೆ. ಈ ಸ್ಥಳದಿಂದ, ಅಕಸ್ಮಾತಾಗಿ ಕೆಳಗೆ ಬಿದ್ದರೆ, ಶಿವನ ಪಾದ ಸೇರುವುದು ಖಚಿತಾನೆ . ಅದಕ್ಕೆ ಈ ಹೆಸರು. ಇಲ್ಲಿಯೂ ಕೂಡ ಛಾಯಾ ಚಿತ್ರ ಗಳನ್ನು ತೆಗೆದು ಕೊಂಡು, ಮುಂದೆ ನಮ್ಮ ಪ್ರಯಾಣವನ್ನು ನಯಾಗರ ನಗರದ ಕಡೆ ಬೆಳೆಸಿದೆವು. ಅಮೇರಿಕಾದಲ್ಲಿ U ತಿರುವು ಇಲ್ಲಾ. ಅದೇ ಕಷ್ಟ ಆಗಿದ್ದು ನೋಡಿ. ನಾವು ಹೋಗುವ ರಸ್ತೆ ಒಂದು ಕಡೆ ತಪ್ಪಾಯಿತು. ಅದಕ್ಕೆ ಪ್ರತಿ ಫಲ ವಾಗಿ , ಪೂರ್ತಿ ಪಿಟ್ಟ್ಸ್ ಬರ್ಗ್ ನ ಡೌನ್ ಟೌನ್ ನ ದರ್ಶನ ಮಾಡಿದೆವು. ಇಲ್ಲೇ ನಮ್ಮ ಪ್ರಯಾಣದ ಅರ್ಧ ಗಂಟೆ ವ್ಯರ್ಥವಾಯಿತು. ಹಾಗು ಹೀಗೂ ೩ ಗಂಟೆಗೆ ಪಿಟ್ಟ್ಸ್ ಬರ್ಗ್ ನಗರ ಬಿಟ್ಟು I 279 N ಪ್ರವೇಶಿಸಿ ನಯಾಗರಾ ನಗರ ದ ಕಡೆ ಹೊರಟೆವು.

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು