Tuesday, July 14, 2009

ಐದೂವರೆ ಲಕ್ಷ ಎಂಜಿನಿಯರ್‌ಗಳಲ್ಲಿ ಒಬ್ಬನೂ ಏಕೆ ಗೇಟ್ಸ್, ಜಾಬ್ಸ್, ಡೆಲ್ ಆಗಲಿಲ್ಲ?

ಗೆಳೆಯರೇ ಮತ್ತು ಗೆಳತಿಯರೆ,
ನಾನು ಪ್ರತಾಪ್ ಸಿಂಹ ಅವರ ಒಬ್ಬ ಕಟ್ಟಾ ಅಭಿಮಾನಿ. ಇವರು ಸಾಫ್ಟ್ವೇರ್ ಇಂಜಿನಿಯರ್ ಗಳ ಬಗ್ಗೆ ಬರೆದ ಒಂದು ಲೇಖನ ನನಗೆ ತುಂಬಾ ಇಷ್ಟ ಆಯಿತು. ಅದನ್ನೇ ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ ನಿಮ್ಮ ಅಭಿಪ್ರಾಯಗಳನ್ನು ನನಗೆ ಅಥವಾ ಪ್ರತಾಪ್ ಸಿಂಹ ಅವರಿಗೆ ತಿಳಿಸಿ. ಅವರ ಇಮೇಲ್ ವಿಳಾಸ : pratap_deva@yahoo.co.in

ಅವತ್ತು ಭಾರತೀಯ ಬಾಹ್ಯಾಕಾಶ ವಿಜಾನದ ಪಿತಾಮಹ ವಿಕ್ರಂ ಸಾರಾಭಾಯಿ ಅವರಿಂದ ಪ್ರೇರಿತರಾಗಿದ್ದ ಸತೀಶ್ ಧವನ್, ಅಬ್ದುಲ್ ಕಲಾಂ ಮುಂತಾದ ವಿಜಾನಿಗಳು ಒಂದು ಜಗುಲಿಯಂತಹ ಜಾಗದಲ್ಲಿ ಕುಳಿತು ದೇಶದ ಮೊದಲ ಉಪಗ್ರಹವಾದ ‘ಆರ್ಯಭಟ’ವನ್ನು Assemble ಮಾಡಿದ್ದರು. ಅದಕ್ಕೂ ಮೊದಲು ಒಂದೊಂದು ಬಿಡಿ ಭಾಗಗಳನ್ನೂ ಸೈಕಲ್ ಮೇಲೆ ತಂದಿದ್ದರು. ಎಲ್ಲ ಭಾಗಗಳನ್ನೂ ಜೋಡಿಸಿದ ನಂತರ ಸೋವಿಯತ್ ರಷ್ಯಾಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಬೈಕನೂರ್ ಉಡಾವಣಾ ಕೇಂದ್ರದಿಂದ 1975ರಲ್ಲಿ ಭೂಸ್ಥಿರ ಕಕ್ಷೆಯಲ್ಲಿ ಸ್ಥಿರಗೊಳಿಸಿದ್ದರು.

ಆನಂತರ ರೂಪುಗೊಂಡ ‘ಭಾಸ್ಕರ-1’ ‘ಭಾಸ್ಕರ-2’ಗಳನ್ನೂ ರಷ್ಯಾದ ಬಾಹ್ಯಾಕಾಶ ಕೇಂದ್ರದಿಂದಲೇ ಆಗಸಕ್ಕೆ ಉಡಾವಣೆ ಮಾಡಬೇಕಾಗಿ ಬಂತು. ಅಷ್ಟಕ್ಕೂ ಅಮೆರಿಕ, ರಷ್ಯಾ, ಫ್ರಾನ್ಸ್ ಮುಂತಾದ ಮೂರೇ ರಾಷ್ಟ್ರಗಳ ಬಳಿ ಮಾತ್ರ ಅಂತಹ ಉಡಾವಣಾ ತಂತ್ರeನ ಹಾಗೂ ವಾಹಕವಿತ್ತು. ಆದರೇನಂತೆ ಮೂರನೇ ಉಪಗ್ರಹವಾದ ‘ರೋಹಿಣಿ’ಯನ್ನು ಸ್ವಂತ ಉಡಾವಣಾ ವಾಹಕದ ಮೂಲಕ ಲಾಂಚ್ ಮಾಡುವ ಸಾಹಸಕ್ಕೆ ಕೈಹಾಕಿತು ಇಸ್ರೊ(ISRO). ಅದೇ SLV(Satellite Launch Vehicle). ಇಸ್ರೊ ತೋರಿದ ಧೈರ್ಯವೇನೋ ಮೆಚ್ಚುವಂಥದ್ದಾಗಿತ್ತು. ಆದರೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಮ್ಮ ಎಸ್‌ಎಲ್‌ವಿಗಳು ಆಗಸಕ್ಕೆ ನೆಗೆದ ಕೆಲವೇ ಕ್ಷಣಗಳಲ್ಲಿ ಉಪಗ್ರಹ ಸಮೇತ ಬಂಗಾಳಕೊಲ್ಲಿಗೆ ಬೀಳಲಾರಂಭಿಸಿದವು. ಅವೇನು ಒಂದೆರಡು ವೈಫಲ್ಯಗಳಲ್ಲ, ಹಾರಿಸಿದವುಗಳೆಲ್ಲ ಮತ್ತೆ ಕೆಳಕ್ಕೇ ಬರುತ್ತಿದ್ದವು. ಹಾಗಾಗಿ SLVಗಳನ್ನು Sea Loving Vehiclesಎಂದು ಜನ ಜರಿಯಲಾರಂಭಿಸಿದರು. ಮತ್ತೆ ಕೆಲವರು ಬಜಾಜ್ ಸ್ಕೂಟರ್‌ನಂತೆ ಒಂದು ಕಡೆ ವಾಲಿಸಿ ಸ್ಟಾರ್ಟ್ ಮಾಡಿದರೆ ಆಗಸಕ್ಕೆ ನೆಗೆಯಬಹುದೇನೋ ಎಂದು ಗೇಲಿ ಮಾಡಹತ್ತಿದರು. ಇತ್ತ ವ್ಯಂಗ್ಯಚಿತ್ರಕಾರರು ತಲೆಕೆಳಗಾದ (Upside down) ರಾಕೆಟ್‌ನ ಕಾರ್ಟೂನ್ ಬರೆದು ಕಿಚಾಯಿಸಿದರೆ, ಪತ್ರಕರ್ತರು “20 ಕೋಟಿ ಸಮುದ್ರದ ಪಾಲು”, “30 ಕೋಟಿ ಬಂಗಾಳ ಕೊಲ್ಲಿಗೆ”, “40 ಕೋಟಿ ನೀರಿಗೆ” ಎಂದು ಥರಥರಹದ ತಲೆಬರಹ ಕೊಟ್ಟು ಬರೆಯಲಾರಂಭಿಸಿದರು

ಅವು ಎಂಥವರೂ ಆತ್ಮಸ್ಥೈರ್ಯ ಕಳೆದುಕೊಳ್ಳುವಂತಹ ಸೋಲುಗಳಾಗಿದ್ದವು.

ಆದರೂ ಇಸ್ರೊ ತನ್ನ ಪ್ರಯತ್ನವನ್ನು ಬಿಡಲಿಲ್ಲ. ಒಂದೆಡೆ ಉಪಗ್ರಹ ತಯಾರಿಕೆಗಿಂತ ಉಡಾವಣೆಗೇ ಹೆಚ್ಚು ದುಡ್ಡು ಕೊಟ್ಟು ರಷ್ಯಾದ ಬೈಕನೂರ್ ಹಾಗೂ ಫ್ರಾನ್ಸ್‌ನ ‘ಫ್ರೆಂಚ್ ಗಯಾನಾ’ದಿಂದ ಇನ್ಸಾಟ್ ಹೆಸರಿನ ಸಾವಿರಾರು ಕೆಜಿ ತೂಗುವ ಬೃಹತ್ ಉಪಗ್ರಹಗಳನ್ನು ಲಾಂಚ್ ಮಾಡುತ್ತ, ಮತ್ತೊಂದೆಡೆ ಸಣ್ಣ ಗಾತ್ರದ ಉಪಗ್ರಹಗಳನ್ನು ಸುಮಾರು 350 ಅಥವಾ 800ಕಿ.ಮೀ.ನಂತಹ ಕಡಿಮೆ ಎತ್ತರದ ಭೂಕಕ್ಷೆಗೆ ನಮ್ಮ ಎಸ್‌ಎಲ್‌ವಿಗಳ ಮೂಲಕವೇ ಉಡಾಯಿಸುವ ಪ್ರಯತ್ನವನ್ನು ಜಾರಿಯಲ್ಲಿಟ್ಟುಕೊಂಡಿತು. 1990ರ ವೇಳೆಗೆ ನಮ್ಮ ಎಸ್‌ಎಲ್‌ವಿಗಳು ವಿಶ್ವಾಸವಿಟ್ಟು ಉಡಾವಣೆ ಮಾಡಬಹುದಾದಂತಹ ಲಾಂಚ್ ವೆಹಿಕಲ್‌ಗಳಾಗಿ ರೂಪುಗೊಂಡವು. ಇಂತಹ ಯಶಸ್ಸಿನಿಂದ ಉತ್ತೇಜನಗೊಂಡ ಇಸ್ರೊ, ಎಎಸ್‌ಎಲ್‌ವಿ, ಪಿಎಸ್‌ಎಲ್‌ವಿಯನ್ನು ದಾಟಿ ಜಿಎಸ್‌ಎಲ್‌ವಿ(ಜಿಯೋಸಿಂಕ್ರೊನಸ್ ಸೆಟಲೈಟ್ ಲಾಂಚ್ ವೆಹಿಕಲ್) ಅಂದರೆ 26 ಸಾವಿರ ಕಿ.ಮೀ. ದೂರದ ಭೂಸ್ಥಿರ ಕಕ್ಷೆಗೆ ಸಾವಿರಾರು ಕೆಜಿ ತೂಕದ ಉಪಗ್ರಹಗಳನ್ನು ಕೊಂಡೊಯ್ದು ಸ್ಥಿರಗೊಳಿಸುವ ತಂತ್ರeನದ ಅಭಿವೃದ್ಧಿಗೆ ಮುಂದಾಯಿತು. ಈ ಹಿನ್ನೆಲೆಯಲ್ಲಿ ರಷ್ಯಾ ಜತೆ ಒಪ್ಪಂದವನ್ನೂ ಮಾಡಿಕೊಂಡಿತು. ಆದರೆ 1998ರಲ್ಲಿ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಕ್ರಯೋಜೆನಿಕ್ ಎಂಜಿನ್ ಹಾಗೂ ತಂತ್ರeನಗಳೆರಡನ್ನೂ ವರ್ಗಾಯಿಸುವುದಾಗಿ ಮಾಡಿದ್ದ ವಾಗ್ದಾನದಿಂದ ರಷ್ಯಾ ಹಿಂದೆ ಸರಿಯಬೇಕಾಯಿತು. ಆದರೆ ಇಸ್ರೊ ಧೃತಿಗೆಡಲಿಲ್ಲ.

ಇತ್ತ ೧೯೭೭ರಲ್ಲಿ ಜನತಾ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಅಮೆರಿಕದ ಕಂಪನಿಗಳಾದ ಕೋಕಾ ಕೋಲಾ ಹಾಗೂ ಐಬಿಎಂ ಅನ್ನು ಭಾರತದಿಂದಲೇ ಓಡಿಸಿದರು. ಮುನಿಸಿಕೊಂಡ ಅಮೆರಿಕ ಕಂಪ್ಯೂಟರ್ ಚಿಪ್‌ಗಳನ್ನು ನಾವು ಆಮದು ಮಾಡಿಕೊಳ್ಳುವುದರ ಮೇಲೆಯೇ ನಿರ್ಬಂಧ ಹೇರಿತು, ನಮ್ಮ ಸೆಟಲೈಟ್‌ಗಳಿಗೆ ಬೇಕಾದ ಟ್ರಾನ್ಸ್‌ಪಾಂಡರ್‌ಗಳನ್ನು ಆಮದು ಮಾಡಿಕೊಳ್ಳಲಾಗದಂತಹ ಪರಿಸ್ಥಿತಿಯನ್ನು ಸೃಷ್ಟಿಸಿತು, ತನ್ನ ‘ಕ್ಲಾಸಿಕ್’ ಸೂಪರ್ ಕಂಪ್ಯೂಟರ್ ಅನ್ನು ಕೊಡುವುದಿಲ್ಲ ಅಂದಿತು. ಸಂಕಷ್ಟಕ್ಕೆ ಸಿಲುಕಿದ ಸರಕಾರ ಪುಣೆಯಲ್ಲಿ ‘ಸಿ-ಡಾಕ್’(ಸೆಂಟರ್ ಫಾರ್ ಡೆವೆಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್) ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪನೆ ಮಾಡಿ, ಸಾಫ್ಟ್‌ವೇರ್ ಅಭಿವೃದ್ಧಿಗೆ ಕೈಹಾಕಿತು. ಅಮೆರಿಕ ಕೊಡದಿದ್ದರೇನಂತೆ, ನಮ್ಮ ವಿಜಾನಿಗಳೇ ‘ಪರಮ್’ ಎಂಬ ಮೊಟ್ಟಮೊದಲ ಸೂಪರ್ ಕಂಪ್ಯೂಟರನ್ನು ತಯಾರಿಸಿದರು. ಅದಕ್ಕೂ ಮೊದಲು ಆರಂಭವಾಗಿದ್ದ ‘ಸಿ-ಡಾಟ್’ (ಸೆಂಟರ್ ಫಾರ್ ಡೆವೆಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್) ಎಂಬ ಮತ್ತೊಂದು ಸಂಸ್ಥೆ, ಟೆಲಿಫೋನ್ ಎಕ್ಸ್‌ಚೇಂಜ್, ರೂರಲ್ ಎಕ್ಸ್‌ಚೇಂಜ್‌ಗಳನ್ನು ತಯಾರಿಸುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಅಮೋಘ ಬದಲಾವಣೆಗೆ ನಾಂದಿ ಹಾಡಿತ್ತು. ಹೀಗಾಗಿ ನಮ್ಮ ಸಂಪರ್ಕ ತಂತ್ರeನ ಗಮನಾರ್ಹ ಪ್ರಗತಿ ತೋರಿತು. ‘ಸಿ-ಡಾಟ್’ನಿಂದಾಗಿ ವಿಎಸ್‌ಎನ್‌ಎಲ್, ಎಂಟಿಎನ್‌ಎಲ್, ಬಿಎಸ್‌ಎನ್‌ಎಲ್‌ಗಳಂತ ‘ಗೇಟ್‌ವೇ’ ಸಿದ್ಧಗೊಂಡರೆ, ವಿಶ್ವದರ್ಜೆಯ ಜಿಎಸ್‌ಎಲ್‌ವಿಗಳನ್ನು ತಯಾರು ಮಾಡಿದ ಇಸ್ರೊ, ಸಂಪರ್ಕ ಕ್ರಾಂತಿಗೆ ಅಗತ್ಯವಾದ ಕೆಲಸ ಮಾಡಿತು.

ಇತ್ತೀಚೆಗೆ ಇಸ್ರೊ ಹೊಸದೊಂದು ದಾಖಲೆ ನಿರ್ಮಿಸಿದೆ!

ಕಳೆದ ವರ್ಷದ ಏಪ್ರಿಲ್‌ನಲ್ಲಿ ವಿಶ್ವದ ವಿವಿಧ ರಾಷ್ಟ್ರಗಳ ೮ ಉಪಗ್ರಹಗಳನ್ನು ಒಮ್ಮೆಲೇ, ಒಂದೇ ಉಡಾವಣಾ ವಾಹಕದಿಂದ ಯಶಸ್ವಿಯಾಗಿ ಲಾಂಚ್ ಮಾಡಿದ್ದು, ಜಗತ್ತಿನ ಯಾವ ರಾಷ್ಟ್ರವೂ ಇಂತಹ ಸಾಹಸ ಮಾಡಿಲ್ಲ. ಇವತ್ತು ನೀವು ಕೈಯಲ್ಲೆತ್ತಿಕೊಂಡು ‘ಹಲೋ’ ಎನ್ನುತ್ತೀರಲ್ಲಾ ಆ ಮೊಬೈಲ್ ಕೊಟ್ಟಿದ್ದು ಸಾಫ್ಟ್‌ವೇರ್ ಕ್ಷೇತ್ರವಾಗಿದ್ದರೂ ನಿರ್ಜೀವ ಮೊಬೈಲ್‌ಗೆ ಜೀವ ತುಂಬಿರುವುದು ಇಸ್ರೋದ ಉಪಗ್ರಹಗಳು. ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಬೆಂಗಳೂರಿನಲ್ಲಿ ಕುಳಿತು ಅಮೆರಿಕ, ಬ್ರಿಟನ್, ಜರ್ಮನಿಯ ಕೆಲಸ ಮಾಡಲು ಸಾಧ್ಯವಾಗಿದ್ದರೆ ಅದರ ಹಿಂದೆ ಇಸ್ರೊ ಮತ್ತು ಸಿ-ಡಾಟ್‌ಗಳ ಪರಿಶ್ರಮವಿದೆ. ಸಂಪರ್ಕವೇ ಇಲ್ಲ ಅಂದರೆ ಸಾಫ್ಟ್‌ವೇರ್ ಕ್ಷೇತ್ರ ತಲೆಯೆತ್ತುವುದಕ್ಕಾದರೂ ಹೇಗೆ ಸಾಧ್ಯವಾಗುತ್ತಿತ್ತು?

ಇಂದು ಅಭಿವೃದ್ಧಿಶೀಲ ರಾಷ್ಟ್ರಗಳು ಇಸ್ರೋದ ಉಪಗ್ರಹಗಳನ್ನು, ಟ್ರಾನ್ಸ್‌ಪಾಂಡರ್‌ಗಳನ್ನು ಖರೀದಿ ಮಾಡುತ್ತಿವೆ, ಅವುಗಳ ಉಡಾ ವಣೆಗೂ ಇಸ್ರೋದ ಬಳಿಗೇ ಬರುತ್ತಿವೆ, ಯಶಸ್ವಿ ಚಂದ್ರಯಾನದ ಮೂಲಕ ಬಾಹ್ಯಾಕಾಶ ತಂತ್ರeನದ ವಿಷಯದಲ್ಲಿ ನಾವು ಯಾರಿಗೂ ಕಡಿಮೆಯಲ್ಲ ಎಂದು ಸಾಬೀತುಪಡಿಸಿದೆ. ಅಂದು ಐಎಂಎಫ್, ವರ್ಲ್ಡ್ ಬ್ಯಾಂಕ್, ಎಡಿಬಿಯಿಂದ ಸಾಲತೆಗೆದುಕೊಂಡು ಬರುತ್ತಿದ್ದ ಕಾಲದಲ್ಲಿ ಸರಕಾರ ಕೊಡುತ್ತಿದ್ದ ಪುಡಿಗಾಸಿನಲ್ಲಿ ಕಷ್ಟಪಟ್ಟು, ಆರಂಭಿಕ ಸೋಲಿನ ನೋವು, ಅವಮಾನ ನುಂಗಿಕೊಂಡು ಮೇಲೆ ಬಂದ ಇಸ್ರೊ ಇಂದು ಜಗತ್ತಿನ ಅತ್ಯಂತ ಮುಂದುವರಿದ ರಾಷ್ಟ್ರಗಳು ಭಯಪಟ್ಟುಕೊಳ್ಳುವಂತೆ ಮಾಡಿದೆ. “ಇಸ್ರೊ ನೋಡಿ ಪಾಠ ಕಲಿಯಿರಿ” ಎಂದು ಅಮೆರಿಕದ “ಏರೋಸ್ಪೇಸ್ ಇಂಡಸ್ಟ್ರೀಸ್ ಅಸೋಷಿಯೇಶನ್”(AIA), ಒಮಾಮ ಅವರಿಗೆ ಕಿವಿಮಾತು ಹೇಳಿದೆ. ಅಂದರೆ ಜಗತ್ತಿನ ಏಕೈಕ ಸೂಪರ್ ಪವರ್ ರಾಷ್ಟ್ರ, ‘ಇಸ್ರೊ’ ಸಾಧನೆ ಬಗ್ಗೆ ಹೆದರಿಕೊಂಡಿದೆ. ಆದರೆ ಅದೇ ದೇಶದ ಅಧ್ಯಕ್ಷ ಒಬಾಮ ಬುಧವಾರ 787 ಶತಕೋಟಿ ಡಾಲರ್ “stimulus plan” ಘೋಷಣೆ ಮಾಡಿದ ಕೂಡಲೇ ಭಾರತದ ಸಾಫ್ಟ್‌ವೇರ್ ಕ್ಷೇತ್ರ ಥರಥರ ನಡುಗಲು ಆರಂಭಿಸಿದೆ!

ಏಕೆ?

ಇಸ್ರೊ, ಡಿಆರ್‌ಡಿಓ, ಸಿ-ಡಾಟ್, ಡಾಕ್ ನಂತಹ ಸರಕಾರಿ ಸಂಸ್ಥೆಗಳೇ ಹೆದರದ ಅಮೆರಿಕಕ್ಕೆ ಬರೀ ಬುದ್ಧಿವಂತರೇ ತುಂಬಿರುವ ನಮ್ಮ ಸಾಫ್ಟ್‌ವೇರ್ ಕ್ಷೇತ್ರವೇಕೆ ಬೆಚ್ಚಿಬೀಳುತ್ತಿದೆ? ಹಾಲಿವುಡ್ ನಟ ಆರ್ನಾಲ್ಡ್ ಸ್ವಾಝನಗರ್ 2006ರಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್ ಆಗಿ ಆಯ್ಕೆಯಾದ ಬೆನ್ನಲ್ಲೇ “ಔಟ್ ಸೋರ್ಸಿಂಗ್” (ವ್ಯಾಪಾರ ಹೊರಗುತ್ತಿಗೆ)ಅನ್ನು ನಿಷೇಧ ಮಾಡಲು ಮುಂದಾಗಿದ್ದರು. ಅಂದೇ ನಾವು ಎಚ್ಚೆತ್ತುಕೊಳ್ಳಬಹುದಿತ್ತು. ಆದರೆ “ಯಾರು ಬಂದರೂ ನಮ್ಮನ್ನು ಏನೂ ಮಾಡುವುದಕ್ಕಾಗುವುದಿಲ್ಲ, ಅಮೆರಿಕದ ಕಂಪನಿಗಳು ಪ್ರಾಫಿಟ್ ನೋಡುತ್ತವೆ, ಚೀಪ್ ಲೇಬರ್‌ಗಾಗಿ ಭಾರತಕ್ಕೆ ಬರಲೇಬೇಕು” ಎನ್ನುತ್ತಿದ್ದವರು ಈಗೇಕೆ ನಡುಗ ಲಾರಂಭಿಸಿದ್ದೀರಿ?

ಇದು ಪರಸ್ಪರ ಹಳಿದುಕೊಳ್ಳುವ ಕಾಲವಲ್ಲದಿದ್ದರೂ ನಾವು ಎಡ ವಿದ್ದೆಲ್ಲಿ ಎಂಬುದನ್ನು ಮುಕ್ತವಾಗಿ ಚರ್ಚಿಸುವುದಕ್ಕೇಕೆ ಅಂಜಿಕೆ?

ನೀವೇ ಯೋಚನೆ ಮಾಡಿ, ಐಬಿಎಂ ಅಂದರೆ ಹಾರ್ಡ್‌ವೇರ್, ಸಿಸ್ಕೋ ಅಂದ್ರೆ ನೆಟ್‌ವರ್ಕಿಂಗ್, ಮೈಕ್ರೊಸಾಫ್ಟ್ ಮತ್ತು ಗೂಗ್ಲ್ ಅಂದ್ರೆ ಸಾಫ್ಟ್‌ವೇರ್, ನೋಕಿಯಾ ಅಂದ್ರೆ ಮೊಬೈಲ್ ಟೆಕ್ನಾಲಜಿ. ಅದೇ ರೀತಿ ನಮ್ಮ ದೇಶೀಯ ಕಂಪನಿಗಳಾದ ಟಾಟಾ ಅಂದ್ರೆ ಸ್ಟೀಲ್ ಮತ್ತು ಅಟೋಮೊಬೈಲ್ಸ್, ಬಿರ್ಲಾ ಅಂದರೆ ಸಿಮೆಂಟ್, ಕಿರ್ಲೋಸ್ಕರ್ ಅಂದರೆ ಎಂಜಿನ್ಸ್. ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಸತ್ಯಂ ಅಂದರೆ? ನಮ್ಮ ಸಾಫ್ಟ್‌ವೇರ್ ಕ್ಷೇತ್ರದ ದೈತ್ಯ ಕಂಪನಿಗಳು ಇವೇ ನಾಲ್ಕಲ್ಲವೆ? ಇವುಗಳ ಹೆಸರು ಕೇಳಿದ ಕೂಡಲೇ ಯಾವ ‘ಪ್ರಾಡಕ್ಟ್’ ನೆನಪಾಗುತ್ತದೆ? ಅಮೆರಿಕ ವರ್ಷಕ್ಕೆ ೭೦ ಸಾವಿರ ಎಂಜಿನಿಯರಿಂಗ್ ಪದವೀಧರರನ್ನು ರೂಪಿಸುತ್ತಿದೆ, ಇಡೀ ಯುರೋಪ್ (26 ದೇಶಗಳು) ವರ್ಷಕ್ಕೆ ರೂಪಿಸುವ ಒಟ್ಟು ಎಂಜಿನಿಯರಿಂಗ್ ಪದವೀಧರರ ಸಂಖ್ಯೆ ೧ ಲಕ್ಷ. ಇತ್ತ ನಮ್ಮ AICTE(All India Council for Technical Education) ಪ್ರಕಾರ ಭಾರತದಲ್ಲಿ ತಾಂತ್ರಿಕ ಪದವಿ ಕೊಡುವ ೧೧೩ ವಿಶ್ವವಿದ್ಯಾಲಯಗಳಿವೆ, ೨೦೮೮ ಕಾಲೇಜುಗಳಿವೆ. ಒಂದು ವರ್ಷಕ್ಕೆ ಐದೂವರೆ ಲಕ್ಷ ಎಂಜಿನಿಯರಿಂಗ್ ಪದವಿಧರರು ಕಾಲೇಜಿನಿಂದ ತೇರ್ಗಡೆಯಾಗಿ ಬರುತ್ತಿದ್ದಾರೆ. ಅವರಲ್ಲಿ ಶೇ. ೩೫ರಷ್ಟು ಪದವೀಧರರು ಕಂಪ್ಯೂಟರ್ ಸೈನ್ಸ್ ಹಾಗೂ ಇನ್‌ಫರ್ಮೇಷನ್ ಸೈನ್ಸ್ ಬ್ರಾಂಚ್‌ನವರಾಗಿದ್ದಾರೆ. ಆದರೂ ನಮ್ಮಲ್ಲೇಕೆ ಆಪಲ್, ಐಬಿಎಂ, ಮೈಕ್ರೊಸಾಫ್ಟ್, ಡೆಲ್‌ನಂತಹ ಒಂದು ಕಂಪನಿಯೂ ರೂಪುಗೊಳ್ಳಲಿಲ್ಲ? ಅಷ್ಟು ಜನರಲ್ಲಿ ಬಿಲ್ ಗೇಟ್ಸ್, ಮೈಕೆಲ್ ಡೆಲ್, ಸ್ಟೀವ್ ಜಾಬ್ಸ್, ಜೋಸೆಫ್ ರಾಡ್ನಿ ಕ್ಯಾನಿಯನ್ ಥರದವರು ಒಬ್ಬನೂ ಏಕೆ ಹೊರಹೊಮ್ಮಲಿಲ್ಲ? ಗೇಟ್ಸ್, ಡೆಲ್, ಜಾಬ್ಸ್ ಇವರೆಲ್ಲ ಕಾಲೇಜನ್ನೇ ಅರ್ಧಕ್ಕೆ ಬಿಟ್ಟವರೆಂಬುದು ಬೇರೆ ಮಾತು. ಆದರೆ ಅತ್ಯಂತ ಪ್ರತಿಭಾನ್ವಿತರು ನಮ್ಮಲ್ಲಿದ್ದರೂ ‘Innovation’ ಎಂಬ ‘ಕಲ್ಚರ್’ ಏಕೆ ಕಾಣುತ್ತಿಲ್ಲ?

ಇಷ್ಟಾಗಿಯೂ ಕೆಲವರು ನಮ್ಮ ಬೆಂಗಳೂರಿನಲ್ಲಿ ‘ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್’ ಇದೆ, ‘ನೋಕಿಯಾ’ದವರ ‘ಸಂಶೋಧನೆ ಮತ್ತು ಅಭಿವೃದ್ಧಿ’(R&D ) ಘಟಕ ಇದೆ, ಐಟಿಯವರ ಕೊಡುಗೆ ಕಣ್ಣಿಗೆ ಕಾಣದಿದ್ದರೂ ನೀವು ಬಳಸುವ ಪ್ರತಿಯೊಂದು ಎಲೆಕ್ಟ್ರಾನಿಕ್ ಉಪಕರಣಗಳ ‘ಒಳಗೆ’ ಇದೆ ಎಂದು ತಮ್ಮನ್ನು ತಾವೇ ಸಮಾಧಾನಪಡಿಸಿಕೊಳ್ಳುತ್ತಿದ್ದಾರೆ! ಹೌದು, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಹಾಗೂ ನೋಕಿಯಾ ಮುಂತಾದ ಕೆಲವು ಕಂಪನಿಗಳು ಬೆಂಗಳೂರು ಮತ್ತು ಭಾರತದ ಇನ್ನಿತರ ಭಾಗಗಳಲ್ಲಿ ತಮ್ಮ R&D ಘಟಕವನ್ನು ಸ್ಥಾಪನೆ ಮಾಡಿರಬಹುದು. ಅವುಗಳಲ್ಲಿ ರೂಪುಗೊಳ್ಳುತ್ತಿರುವ ತಂತ್ರಜಾನವನ್ನು ನಾವು ನಿತ್ಯವೂ ಬಳಕೆ ಮಾಡುತ್ತಿರುವ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಅಳವಡಿಸಿರಬಹುದು. ಹಾಗಂತ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್, ನೋಕಿಯಾ, ಮೈಂಡ್ ಟ್ರೀಗಳು ಭಾರತೀಯ ಕಂಪನಿಗಳಾದಾವೆ? ಅವುಗಳದ್ದು ಶುದ್ಧ ವ್ಯಾಪಾರ. ನೋಕಿಯಾ ಕಂಪನಿ ಬೆಂಗಳೂರಿನ R&D ಘಟಕದಲ್ಲಿ ಒಂದು ಸಂಶೋಧನೆ ಮಾಡಿ, ಹೊಸ ತಂತ್ರಜಾನವನ್ನು ರೂಪಿಸಿತೆಂದಿಟ್ಟುಕೊಳ್ಳಿ. ಆ ತಂತ್ರಜಾನವನ್ನು ಹೊಂದಿರುವ ಮೊಬೈಲನ್ನು ಭಾರತದ ಮಾರುಕಟ್ಟೆಗೇ ಬಿಡುತ್ತದೆ. ನೋಕಿಯಾ ಕಂಪನಿ ಭಾರತ ಮೊಬೈಲ್ ಕ್ಷೇತ್ರದಲ್ಲಿ ಶೇ.೫೦ಕ್ಕೂ ಹೆಚ್ಚು ಪಾಲು ಹೊಂದಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ನೋಕಿಯಾ ಮೊಬೈಲ್‌ಗಳು ಖರ್ಚಾಗುವುದೇ ಭಾರತದಲ್ಲಿ. ಅಂದರೆ ತಂತ್ರಜಾನವನ್ನು ಸಿದ್ಧಪಡಿಸಿದ್ದು ನಮ್ಮ ಎಂಜಿನಿಯರ್‌ಗಳೇ, ಮೊಬೈಲ್ ಖರೀದಿ ಮಾಡಿದವರೂ ಭಾರತೀಯ ಗ್ರಾಹಕರೇ. ನಮ್ಮ ಪ್ರತಿಭೆ, ನಮ್ಮದೇ ಗ್ರಾಹಕ. ಆದರೆ ಲಾಭ ಫಿನ್‌ಲ್ಯಾಂಡ್ ಕಂಪನಿಗೆ! ಒಂದು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್, ನೋಕಿಯಾ ಇಟ್ಟುಕೊಂಡು ಮಾತನಾಡಬೇಡಿ. ಒಟ್ಟಾರೆಯಾಗಿ ನೋಡಿ. ಜಗತ್ತು ನಮ್ಮನ್ನು ಹೇಗೆ ನೋಡುತ್ತಿದೆ? ಇಷ್ಟಕ್ಕೂ ಈ ಕಂಪನಿಗಳು ಭಾರತಕ್ಕೇಕೆ ಬಂದಿವೆ?

Just for cost advantage!

ನಮ್ಮ ಮಾರುಕಟ್ಟೆಯಲ್ಲಿ ಬೇಡಿಕೆ ಇರುವವರೆಗೂ ನೋಕಿಯಾ ಭಾರತದಲ್ಲಿರುತ್ತದೆ, ಲಾಭ ಕಡಿಮೆಯಾಗಲು ಆರಂಭಿಸಿದರೆ ಮೊದಲು ಒಂದಿಷ್ಟು ಜನರನ್ನು ಕೆಲಸದಿಂದ ಕಿತ್ತುಹಾಕುತ್ತಾರೆ, ತದನಂತರ ಬಂಡವಾಳವನ್ನೇ ಹಿಂತೆಗೆದುಕೊಂಡು, ಬಾಗಿಲು ಎಳೆದುಕೊಂಡು ಜಾಗ ಖಾಲಿ ಮಾಡುತ್ತಾರೆ. ಈಗ ಕಂಡು ಬರುತ್ತಿರುವುದು ಇಂತಹ ಪ್ರಕ್ರಿಯೆಗಳೇ ಅಲ್ಲವೆ? ಎಲ್ಲ ವಿದೇಶಿ ಕಂಪನಿಗಳು ಮಾಡುವುದೂ ಇದನ್ನೇ.

ಖಂಡಿತ ಯಾರೂ ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಸಾಮರ್ಥ್ಯವನ್ನು ಜರಿಯುತ್ತಿಲ್ಲ. ಅವರ ಪ್ರತಿಭೆ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯೂ ಸಾಫ್ಟ್‌ವೇರ್ ಎಂಜಿನಿಯರ್‍ಸ್ ಅಂದರೆ ಪ್ರತಿಭಾನ್ವಿತರು, ಅರಿತವರು ಎಂಬ ಭಾವನೆ ಹೊಂದಿದ್ದಾನೆ. ಆದರೆ “ವರ್ಕ್ ಕಲ್ಚರ್” ಅಂದರೆ ಬೆಳಗ್ಗೆ ೮ ರಿಂದ ರಾತ್ರಿ ೧೦ ಗಂಟೆವರೆಗೆ ಕತ್ತ್ತೆ ಥರಾ ದುಡಿಯುವುದಕ್ಕೆ, ಸ್ಮಾರ್ಟ್ ಆಗಿ ಕೆಲಸ ಮಾಡುವುದಕ್ಕೆ ಸಂಬಂಧಪಟ್ಟಿದ್ದಲ್ಲ, Constant learning, Vision, Foresightednessಗೆ ಸಂಬಂಧಿಸಿದ್ದು. ಇಂತಹ ಕಲಿಕೆಯ ಸತತ ದಾಹ, ತುಡಿತ ಹಾಗೂ ದೂರದೃಷ್ಟಿಗಳು Innovationಗೆ ದಾರಿ ಮಾಡಿಕೊಡುತ್ತವೆ. ಒಂದು ವೇಳೆ, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್, ನೋಕಿಯಾ ಭಾರತದಲ್ಲಿ R&D ಘಟಕ ಸ್ಥಾಪಿಸಿ, ಇಲ್ಲಿನ ಪ್ರತಿಭೆಯನ್ನು ಉಪಯೋಗಿಸಿಕೊಂಡು ಹೊಸದನ್ನು ಸೃಷ್ಟಿಸಿ, ಕೊನೆಗೆ ಭಾರತೀಯ ಮಾರುಕಟ್ಟೆಯಲ್ಲೇ ತನ್ನ ವಸ್ತುವನ್ನು ಮಾರಬಹುದಾದರೆ, ಅದೇ ಕೆಲಸವನ್ನು ಭಾರತೀಯ ಕಂಪನಿಗಳೇ ಏಕೆ ಮಾಡಬಾರದು? ಇಸ್ರೊದವರೂ ಕೂಡ ಸ್ವಂತ ತಂತ್ರಜಾನವನ್ನು ಅಭಿವೃದ್ಧಿಪಡಿಸುವ ಬದಲು ರಷ್ಯಾ, ಫ್ರಾನ್ಸ್‌ನ ಉಪಗ್ರಹಗಳನ್ನೇ ಖರೀದಿ ಮಾಡಬಹು ದಿತ್ತು, ಫ್ರೆಂಚ್ ಗಯಾನಾ, ಬೈಕನೂರ್‌ಗಳಿಂದಲೇ ಆಗಸಕ್ಕೆ ಉಡಾವಣೆ ಮಾಡಬಹುದಿತ್ತಲ್ಲವೆ? ರಿಮೋಟ್ ಸೆನ್ಸಿಂಗ್ (IRS), ಟ್ರಾನ್ಸ್‌ಪಾಂಡರ್‍ಸ್, ಉಪಗ್ರಹ ನಿಯಂತ್ರಣ ಸಾಫ್ಟ್‌ವೇರ್‌ನಂತಹ ಬುದ್ಧಿಗೇ ಸವಾಲೆಸೆಯುವಂತಹ ತಂತ್ರಜಾನಗಳನ್ನೇಕೆ ತಲೆಕೆಡಿಸಿ ಕೊಂಡು ಅಭಿವೃದ್ಧಿಪಡಿಸಬೇಕಿತ್ತು? ಅವುಗಳನ್ನು ಯಾಕಾಗಿ ದೇಶೀಯವಾಗಿ ರೂಪಿಸಿದರು?

ನಮ್ಮ ಸಾಫ್ಟ್‌ವೇರ್ ಕ್ಷೇತ್ರ ಎಡವಿದ್ದೇ ಇಲ್ಲಿ.

ದುರದೃಷ್ಟವಶಾತ್, ನಾವು ಹಾಡಿ ಹೊಗಳುವ ಮೂರ್ತಿ, ರಾಜು, ದೊರೈ, ಪ್ರೇಮ್‌ಜಿ ಮುಂತಾದ ಐಟಿ ದೊರೆಗಳು ಕೊನೆಯವರೆಗೂ ಕಾಂಟ್ರಾಕ್ಟರ್‌ಗಳಾಗಿಯೇ ಉಳಿದು ಬಿಟ್ಟರು. ಅಂದರೆ ವಿದೇಶಿ ಕಾಮಗಾರಿಗಳ ಗುತ್ತಿಗೆ ಪಡೆದುಕೊಂಡು ಬಂದು, ನಮ್ಮ ಪ್ರತಿಭಾವಂತ ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಐಟಿ ಕೂಲಿಗಳನ್ನಾಗಿ ಮಾಡಿ, ‘ಕಮೀಷನ್’ ಹೊಡೆಯುವ ‘ಸ್ಟ್ರೀಟ್ ಸ್ಮಾರ್ಟ್‌ನೆಸ್’ನಲ್ಲೇ ಸ್ವರ್ಗಸುಖ ಕಾಣಲಾರಂಭಿಸಿದರು. ಹತ್ತಿಪ್ಪತ್ತು ವರ್ಷ ಟ್ಯಾಕ್ಸ್ ಹಾಲಿಡೇ ಪಡೆದುಕೊಂಡಿದ್ದಲ್ಲದೆ ಸಿಕ್ಕ ಅವಕಾಶಗಳಲ್ಲೆಲ್ಲ ಸರಕಾರವನ್ನೇ ತರಾಟೆ ತೆಗೆದುಕೊಳ್ಳಲು ಆರಂಭಿಸಿದರು. ಈ ದೇಶವನ್ನೇ ಬದಲಿಸುವ ‘ಐಡಿಯಾ’ ನಮ್ಮ ಬಳಿ ಇದೆ ಎಂಬಂತೆ ವರ್ತಿಸಲಾರಂಭಿಸಿದ ಇವರಿಗೆ ತಮ್ಮ ಕ್ಷೇತ್ರದ ಬಗ್ಗೆಯೇ ದೂರದೃಷ್ಟಿಗಳಿರಲಿಲ್ಲ. Self Righteousness ಅನ್ನುವ ಹಾಗೆ ನಮಗೆ ಮಾತ್ರ ಎಲ್ಲ ಗೊತ್ತು, ನಾವು ಹೇಳಿದ್ದೇ ಸರಿ ಎಂಬ ದರ್ಪ ತೋರಿದ ಇವರಿಗೆ ಮುಂದೆ ಕಾದಿದ್ದ ಗಂಡಾಂತರವೇ ಕಾಣಲಿಲ್ಲ. ಇನ್ಫೋಸಿಸ್, ವಿಪ್ರೊದಂತಹ ಕಂಪನಿಗಳು ‘Cream of Talent’ ಅನ್ನುತ್ತಾರಲ್ಲಾ ಅಂತಹ ಪ್ರತಿಭಾವಂತರನ್ನು ಪ್ರತಿ ಕಾಲೇಜುಗಳಿಂದಲೂ ಆಯ್ಕೆ ಮಾಡಿಕೊಂಡು ಬಂದು ಅಡುಗೆ ಭಟ್ಟ ಅಥವಾ ಗಾರೆ ಕೆಲಸದವನಂತೆ ಮಾಡಿಕೊಂಡಿದ್ದು ಎಷ್ಟು ಸರಿ? ಏಕೆ ನಮ್ಮ ಯಾವ ಖ್ಯಾತನಾಮ ಐಟಿ ಕಂಪನಿಗಳಲ್ಲೂ ಯೋಗ್ಯ R&D ಘಟಕಗಳಿಲ್ಲ? ಏಕೆ ಪೂರ್ಣ ಕಾಲಿಕ Innovative ಯುನಿಟ್ ಹೊಂದಿಲ್ಲ? ಏಕೆಂದರೆ ನಮ್ಮ ಐಟಿ ದೊರೆಗಳಿಗೆ Globalised Knowledge ಅನ್ನು Localise ಮಾಡಬೇಕು ಎಂಬುದು ಗೊತ್ತಾಗಲೇ ಇಲ್ಲ. ‘ಪ್ರಾಜೆಕ್ಟ್’ ಮತ್ತು ‘ಪ್ರಾಡಕ್ಟ್’ ಮಧ್ಯೆ ಇರುವ ಮಹತ್ತರ ವ್ಯತ್ಯಾಸವೇ ಇವರಿಗೆ ಅರ್ಥವಾಗಲಿಲ್ಲ. ಅಂದರೆ ವಿದೇಶಿ ‘ಪ್ರಾಜೆಕ್ಟ್’ಗಳನ್ನು ಹಿಡಿಯಲು ಹವಣಿಸುವುದಕ್ಕಿಂತ ಜಾಗತಿಕ ಜಾನವನ್ನು ಸ್ಥಳೀಯಮಟ್ಟಕ್ಕೆ ತಂದು ಸಂಶೋಧನೆ ಮೂಲಕ ‘ಪ್ರಾಡಕ್ಟ್’ ರೂಪಿಸಿ, ಅವುಗಳನ್ನು ಹಿಡಿದುಕೊಂಡು ಕಂಪನಿಗಳ ಬಳಿಗೆ ಹೋಗಬೇಕು, ಮಾರುಕಟ್ಟೆಯಲ್ಲಿ ನಮ್ಮ ಪ್ರಾಡಕ್ಟ್‌ಗಳನ್ನೇ ಮಾರಾಟ ಮಾಡುವಂತಾಗಬೇಕು ಎಂಬುದನ್ನು ಅರಿತುಕೊಳ್ಳಲಿಲ್ಲ. ಇನ್ನೂ ಸರಳವಾಗಿ ಹೇಳುವುದಾದರೆ, ನಮ್ಮ ಸಾಫ್ಟ್‌ವೇರ್ ಕ್ಷೇತ್ರ ‘Servicing’ನಿಂದ ‘Research’ ಹಾಗೂ ‘Product development’ಗೆ ಗ್ರಾಜುಯೇಟ್ ಆಗಲೇ ಇಲ್ಲ. ಹಾಗಾಗಿ ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ‘Pursuit of Knowledge’ ಬಿಟ್ಟು ಕೂಲಿ ಕೆಲಸ ಮಾಡಬೇಕಾಗಿ ಬಂತು. ಸಾಫ್ಟ್‌ವೇರ್ ಕೋಡಿಂಗ್, ಡೆಸೈನಿಂಗ್‌ನಾಚೆ ಯೋಚಿಸಲು ಅವಕಾಶವೇ ದೊರೆಯಲಿಲ್ಲ. ಹಾಗಾಗಿ Core sector ನಮ್ಮಲ್ಲಿ ರೂಪುಗೊಳ್ಳಲಿಲ್ಲ.

ಖಂಡಿತ ನಮ್ಮ ಐಟಿ ದೊರೆಗಳು ಪ್ರಾರಂಭದಲ್ಲಿ ಕಾಮಗಾರಿ ಗುತ್ತಿಗೆ ಹಿಡಿಯುವ ಕೆಲಸವನ್ನು ಆರಂಭಿಸಿದ್ದು ತಪ್ಪೇನಾಗಿರಲಿಲ್ಲ. ಆದರೆ ಒಂದು ಹಂತದ ನಂತರ R&D ಬಗ್ಗೆ ಗಂಭೀರ ದೃಷ್ಟಿಹಾಯಿಸಬೇಕಿತ್ತು. ನಾವು ಯಾವತ್ತೂ ‘ಪ್ರಾಡಕ್ಟ್’ ಮೇಲೆ ಇನ್ವೆಸ್ಟ್ ಮಾಡುತ್ತಾ ಬಂದಿದ್ದೇವೆ, ಅಮೆರಿಕದವರು ‘ಪ್ರಾಡಕ್ಟ್’ಗೆ ಬದಲಾಗಿ ಆ ‘ಪ್ರಾಡಕ್ಟ್’ ಅನ್ನು ಸಂಶೋಧನೆ ಮಾಡುವವನ ಮೇಲೆ ಇನ್ವೆಸ್ಟ್ ಮಾಡುತ್ತಾರೆ. ಇದನ್ನು ನಮ್ಮವರೂ ಅರಿತುಕೊಂಡು Innovationಗೆ ಮುಂದಾಗಬೇಕಿತ್ತು. ಸಂಶೋಧನೆಯೆಂದರೆ ಕಂಪನಿಗಳು R&D ಘಟಕ ಸ್ಥಾಪನೆ ಮಾಡುವುದು, ಯಾವುದಾದರೂ ಐಐಎಂ ಅಥವಾ ಐಐಟಿಯಲ್ಲಿ ಒಂದು ‘ಸಂಶೋಧನಾ ಪೀಠ’ ಸ್ಥಾಪನೆ ಮಾಡುವುದಷ್ಟೇ ಅಲ್ಲ. ವಿವಿಧ ಕಾಲೇಜುಗಳ ಒಂದೊಂದು ಡಿಪಾರ್ಟ್‌ಮೆಂಟ್‌ಗಳನ್ನೇ ದತ್ತು ತೆಗೆದುಕೊಂಡು ವಿದ್ಯಾರ್ಥಿಗಳನ್ನು ಕಾಲೇಜು ಹಂತದಲ್ಲೇ ಸಂಶೋಧನೆಗೆ ಹಚ್ಚಬೇಕಾಗಿತ್ತು, Pure Science ಬಗ್ಗೆ ಆಸಕ್ತಿ ಹುಟ್ಟಿಸಬೇಕಿತ್ತು. ಇಂತಹ ಕೆಲಸವನ್ನು ಯಾವ ಕಂಪನಿ ಮಾಡಿತು? ಹಾಗಾಗಿ ನಮ್ಮ ಎಂಜಿನಿಯರ್‌ಗಳು ತಂತ್ರಜ್ಞರಾದರೇ ಹೊರತು, ಪರಿಣತಿಯನ್ನು ಸಾಧಿಸಲಿಲ್ಲ. ಎಲ್ಲವನ್ನೂ ಸರಕಾರದಿಂದಲೇ ನಿರೀಕ್ಷಿಸಲು ಸಾಧ್ಯವಿಲ್ಲ, Entrepreneurs ಆ ಕೆಲಸ ಮಾಡಬಹುದಿತ್ತು. ಅಂತಿಮವಾಗಿ ಎಂಜಿನಿಯರ್‌ಗಳ ಪ್ರತಿಭೆಯನ್ನು ಉಪಯೋಗಿಸಿಕೊಳ್ಳುವವರು ಅವರೇ ಅಲ್ಲವೆ? ಆದರೆ “Seventy-five per cent of engineering graduates are unemployable” ಎಂದು ಹೇಳಿಕೆ ನೀಡುವ ನಾರಾಯಣಮೂರ್ತಿಯವರಿಗೆ ಅದರಲ್ಲಿ ತಮ್ಮ ಪಾಲೂ ಇದೆ ಎಂಬುದು ಅರ್ಥವಾಗುವುದಿಲ್ಲ!

ಭಾರತೀಯ ಕಂಪನಿಗಳ ಇಂತಹ ಮನಸ್ಥಿತಿಯಿಂದಾಗಿ ‘ನಾಮ್ ಕೇ ವಾಸ್ತೆ’ಗೆ ಒಂದಿಷ್ಟು ಸಂಶೋಧನೆಯ ಶಾಸ್ತ್ರ ನಡೆ ಯುತ್ತಿದೆಯಷ್ಟೇ. ಅದನ್ನೇ ಕೆಲವರು ಇನ್ಫೋಸಿಸ್, ವಿಪ್ರೊಗಳ ಬಳಿ ನೂರಕ್ಕೂ ಹೆಚ್ಚು ಪೇಟೆಂಟ್‌ಗಳಿವೆ ಎಂದು ದೊಡ್ಡ ಸಾಧನೆಯೆಂಬಂತೆ ಹೇಳಿಕೊಳ್ಳುತ್ತಿದ್ದಾರೆ! ವಿಜಾನಿ ಎಂದರೆ ಐನ್‌ಸ್ಟೀನ್, ನ್ಯೂಟನ್ ನೆನಪಾಗುತ್ತಾರೆ, ಅಣೆಕಟ್ಟು ವಿದ್ಯುತ್ ಎಂದ ಕೂಡಲೇ ವಿಶ್ವೇಶ್ವರಯ್ಯ ಕಣ್ಣಮುಂದೆ ಬರುತ್ತಾರೆ. ನಾರಾಯಣಮೂರ್ತಿ, ಪ್ರೇಮ್‌ಜಿ ಎಂದ ಕೂಡಲೇ ಇನ್ಫೋಸಿಸ್, ವಿಪ್ರೊ ನೆನಪಾಗಬಹುದೇ ಹೊರತು, ಯಾವುದೇ ಪ್ರಾಡಕ್ಟ್ ಹೆಸರು ಮನಸ್ಸಿನಲ್ಲಿ ಸುಳಿದು ಬರುವುದಿಲ್ಲ. ಅಷ್ಟಕ್ಕೂ, ಛೋಟಾ-ಮೋಟಾ ಪೇಟೆಂಟ್‌ಗಳನ್ನು ಎಷ್ಟೇ ಹೊಂದಿದ್ದರೂ ಒಂದು ಇಂಡಸ್ಟ್ರಿಯನ್ನೇ ಬದಲಾಯಿಸುವಂತಹ ಯಾವ ತಂತ್ರಜಾನವನ್ನು ಅಭಿವೃದ್ಧಿಪಡಿಸಿ ದ್ದಾರೆ? ಅದಿರಲಿ, ಅಮೆರಿಕದಲ್ಲಿ ‘ವೆಂಚರ್ ಕ್ಯಾಪಿಟಲ್’ ಎಂಬು ದಿದೆ. ಅಂದರೆ ನನ್ನ ಬಳಿ ಇಂಥದ್ದೊಂದು ಯೋಜನೆ ಇದೆ, ಅದರಿಂದ ಇಂತಹ ತಂತ್ರಜಾನವನ್ನು ಅಭಿವೃದ್ಧಿ ಮಾಡಬಹುದು ಎಂದು ನೀವು ವಿಶ್ವಾಸ ಮೂಡಿಸಿದರೆ, ಹೊಸ ಸಾಹಸ ಮಾಡುವವರಿಗೆ ಅವರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಹಣತೊಡಗಿಸುವವರಿದ್ದಾರೆ. ಅವರನ್ನೇ ವೆಂಚರ್ ಕ್ಯಾಪಿಟಲಿಸ್ಟ್‌ಗಳು, ಅದನ್ನೇ ‘ವಿಸಿ ಫಂಡಿಂಗ್’ ಎನ್ನುವುದು. ಆದರೆ ನಮ್ಮ ದೇಶದಲ್ಲಿ ಇಷ್ಟೆಲ್ಲಾ ದುಡ್ಡು ಮಾಡಿದ ಸಾಫ್ಟ್‌ವೇರ್ ಕಂಪನಿಗಳಿದ್ದರೂ ಸಾಹಸಕ್ಕೆ ಮುಂದಾಗುವ, ಹೊಸ ಸಾಧನೆಯನ್ನು ಮಾಡುವ ತುಡಿತ ಹೊಂದಿರುವ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಮೇಲೆ ವಿಶ್ವಾಸವಿಟ್ಟು ಬಂಡವಾಳ ತೊಡಗಿಸಲು ಏಕೆ ಮುಂದಾಗುವುದಿಲ್ಲ? Innovation ಬಗ್ಗೆ ನಮ್ಮ ಕಂಪನಿಗಳು ಏಕೆ ಆಸಕ್ತಿಯನ್ನೇ ತೋರುವುದಿಲ್ಲ? ಸಾಫ್ಟ್‌ವೇರ್ ಉದ್ದಿಮೆ ಪ್ರಾರಂಭವಾಗಿ 25 ವರ್ಷ, ಸಾಫ್ಟ್‌ವೇರ್ ಬೂಮ್ ಆರಂಭವಾಗಿ 15 ವರ್ಷಗಳು ಕಳೆದಿದ್ದರೂ ಸರ್ವಿಸಿಂಗ್‌ನಿಂದ ರೀಸರ್ಚ್‌ಗೇಕೆ ತೇರ್ಗಡೆಯಾಗಿಲ್ಲ? ಯಾರಿಗೆ ಇಂಗ್ಲಿಷ್ ಬರುವುದಿಲ್ಲ, ನಮ್ಮನ್ನು ಹಿಡಿಯಲು ಸಾಧ್ಯವೇ ಇಲ್ಲ ಎಂದು ನಾವು ಹೇಳುತ್ತಿದ್ದೆವೋ ಅಂತಹ ಚೀನಿಯರು ಲೆನೋವೋದಂತಹ ಕಂಪನಿಯನ್ನು ರೂಪಿಸಿದ್ದಾರೆ, ಐಬಿಎಂನ ಹಾರ್ಡ್‌ವೇರ್ ಯುನಿಟ್ಟನ್ನೇ ಖರೀದಿಸಿದ್ದಾರೆ. ನಾವೇಕೆ ಆ ಕೆಲಸ ಮಾಡಲಿಲ್ಲ?

ಇಂತಹ ಮನಸ್ಥಿತಿಯನ್ನು ಇಟ್ಟುಕೊಂಡು ಬಂದಿದ್ದರಿಂದಾಗಿಯೇ ಒಬಾಮ ಅವರ “stimulus plan’ ಬಗ್ಗೆ ನಮ್ಮ ಸಾಫ್ಟ್ ವೇರ್ ಕ್ಷೇತ್ರ ಬೆಚ್ಚಿಬೀಳುವಂತಾಗಿದೆ. ಹಾಗಂತ “ದುಡ್ಡು ಬೇಕೆಂದರೆ ವ್ಯಾಪಾರ ಹೊರಗುತ್ತಿಗೆ ನಿಲ್ಲಿಸಿ, ಎಚ್೧ಬಿ ವೀಸಾ ಹೊಂದಿರುವವರನ್ನು ಮನೆಗೆ ಕಳುಹಿಸಿ” ಎಂಬ ಪೂರ್ವ ಷರತ್ತು ಹಾಕಿರುವ ಒಬಾಮರನ್ನು ದೂರಿ ಪ್ರಯೋಜನವಿಲ್ಲ. ಅಷ್ಟಕ್ಕೂ ಕರ್ನಾಟಕದಲ್ಲಿ ರೈಲ್ವೆ ನೇಮಕಕ್ಕೆ ಬರುವ ಬಿಹಾರಿಗಳನ್ನು ನಾವು ಹೇಗೆ ಬೆದರಿಸುತ್ತೇವೆಯೋ, ಮರಾಠಿಗರು ಉತ್ತರ ಭಾರತದವರನ್ನು ಹೇಗೆ ಹಿಡಿದು ಚಚ್ಚುತ್ತಾರೋ ಅಮೆರಿಕನ್ನರೂ ಕೂಡ ಭಾರತೀಯರು ತಮ್ಮ ಕೆಲಸಕ್ಕೆ ಕುತ್ತು ತಂದಿದ್ದಾರೆ ಎಂಬ ಭಾವನೆ ಹೊಂದಿದ್ದಾರೆ. ನಮ್ಮ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಮುಂದಾಲೋಚನೆ ಇದ್ದಿದ್ದರೆ ಎಂದೋ ಸರ್ವೀಸಿಂಗ್‌ನಿಂದ ಪ್ರಾಡಕ್ಟ್ ಹಾಗೂ ರೀಸರ್ಚ್‌ಗೆ ಕಾಲಿಡಲು ಪ್ರಯತ್ನಿಸುತ್ತಿತ್ತು. ಆಗ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ, ಒಬಾಮಗೆ ಹೆದರುವ ಅಗತ್ಯವೂ ಎದುರಾಗುತ್ತಿರಲಿಲ್ಲ. ಇವತ್ತು ಬ್ಯಾಂಕಿಂಗ್, ಫೈನಾನ್ಸ್, ಮೆಕ್ಯಾನಿಕಲ್, ಆಟೊಮೊಬೈಲ್, ಮೊಬೈಲ್ ಮುಂತಾದ ಕ್ಷೇತ್ರಗಳೂ ಕುಸಿಯಲಾರಂಭಿಸಿದ್ದರೂ ಇವೆಲ್ಲವೂ ಐಟಿ ಫಲಾನುಭವಿ ಮತ್ತು ಐಟಿ Driven Sectorಗಳೇ.

ಇನ್ನೂ ಕಾಲ ಮಿಂಚಿಲ್ಲ.

Never confuse the size of your paycheck with the size of your talent. You are much more than your pay check ಎಂಬ ಮರ್ಲಾನ್ ಬ್ರ್ಯಾಂಡೋ ಅವರ ಡೈಲಾಗನ್ನು ನೆನಪಿಸಿಕೊಳ್ಳಿ. ಇಲ್ಲಿಯವರೇ ಅಮೆರಿಕಕ್ಕೆ ಹೋಗಿ ಜಗತ್ತನ್ನು ನಿಬ್ಬೆರಗಾಗಿಸಬಹುದಾದರೆ ಇಲ್ಲೇ ಇರುವವರು ಏಕೆ ಅಂತಹ ಸಾಧನೆ ಮಾಡುವುದಕ್ಕಾಗುವುದಿಲ್ಲ? ಈ ಹಿನ್ನೆಲೆಯಲ್ಲಿ ನಮ್ಮ ಐಟಿ ದೊರೆಗಳು ಹಾಗೂ ಐಟಿ ಕ್ಷೇತ್ರದಲ್ಲಿರುವವರು ದುಡ್ಡಿನಾಚೆಗಿನ Innovation ಎಂಬ ಪ್ರಪಂಚವನ್ನು ಕಾಣುವಂತಹ ದೂರದೃಷ್ಟಿಯನ್ನು ಬೆಳೆಸಿಕೊಳ್ಳಬೇಕಷ್ಟೆ. ಅದರಿಂದ ಐಟಿಗೇ ಒಳಿತು. ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳ Top-notch talent ಮೇಲೆ ನಮಗೆ ಖಂಡಿತ ವಿಶ್ವಾಸವಿದೆ. ನಮ್ಮ ದೇಶಕ್ಕೆ ಒಳ್ಳೆಯ ಹೆಸರು ತಂದುಕೊಟ್ಟ ಐಟಿ ಬಗ್ಗೆ ನಮ್ಮೆಲ್ಲರಿಗೂ ಅಭಿಮಾನವಿದೆ. ಅನುಮಾನ ಬೇಡ.

From: http://pratapsimha.com/bettale-jagattu/
Collected: Ravi N Rao (ravin143@gmail.com)

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು