Tuesday, July 28, 2009

ಸ್ಟೇ ಹಂಗ್ರಿ, ಸ್ಟೇ ಫೂಲಿಷ್ ಎನ್ನುತ್ತಾನೆ ಸ್ಟೀವ್ ಜಾಬ್ಸ್ !

ಮತ್ತೊಮ್ಮೆ ಪ್ರತಾಪ್ ಸಿಂಹ ರವರ ಒಂದು ಉತ್ತಮ ಅಂಕಣವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ

ಕಾಲೇಜು ಓದದ ಜಾಬ್ಸ್ ಇಷ್ಟೆಲ್ಲಾ ಸಾಧನೆ ಮಾಡಬಹುದಾಗಿದ್ದರೆ ಮಾರ್ಕ್ಸ್ ಕಡಿಮೆ ಬಂತು, ಫೇಲಾಯಿತು ಅಂತ ನೇಣುಹಾಕಿಕೊಳ್ಳುವ ನಾವೇಕೆ ಜೀವನವನ್ನು ಸಕಾರಾತ್ಮಕವಾಗಿ ನೋಡಬಾರದು? ಸೋಲನ್ನೇಕೆ ಸವಾಲಾಗಿ ಸ್ವೀಕರಿಸಬಾರದು? ಆದರೆ ಅದಕ್ಕೆ ಕಲಿಯುವ ಹಸಿವು, ಏನಾದರೂ ಮಾಡಬೇಕೆಂಬ ಹಂಬಲ, ಯಾರನ್ನೂ ಲೆಕ್ಕಿಸದೆ ತೋಚಿದ್ದನ್ನು ಸಾಧಿಸುವ ಎದೆಗಾರಿಕೆ ಬೇಕು. ಅದಕ್ಕೇ ಜಾಬ್ಸ್ ಹೇಳಿದ್ದು Stay Hungry, Stay Foolish!


ಐಮ್ಯಾಕ್, ಐ ಪಾಡ್, ಐ ಟ್ಯೂನ್ಸ್, ಐ ವರ್ಕ್, ಐ ಲೈಫ್, ಐ ಫೋನ್. ಇವುಗಳಲ್ಲಷ್ಟೇ ಅಲ್ಲ, ಆತನ ಬಗ್ಗೆ ಬರೆಯಲಾಗಿರುವ ಅನಧಿಕೃತ ಆತ್ಮಚರಿತ್ರೆಯಾದ ``ಐಕಾನ್"ನಲ್ಲೂ ``ಐ" ಇದೆ! ಅವನನ್ನು ಟೀಕಾಕಾರರು ``Ego Maniac" ಎಂದು ಜರಿದರೂ ಆತನಲ್ಲಿರುವುದು ``ನಾನು" ಎಂಬ ``ಅಹಂ" ಅಲ್ಲ, ನಾನೇನಾದರೂ ವಿಭಿನ್ನವಾದುದನ್ನು ಮಾಡಬೇಕೆಂಬ ಹಂಬಲ. ಇಂತಹ ಹಂಬಲವನ್ನು ಕೆಲವರು ಆಡಿಕೊಂಡಿದ್ದೂ ಇದೆ. ಸ್ಟೀವ್ ಜಾಬ್ಸ್ ಯಾವುದಕ್ಕೂ ತಲೆಕೆಡಿಸಿಕೊಳ್ಳುವ ವ್ಯಕ್ತಿಯಲ್ಲ, ಆದರೆ ಬೇರೆಯವರ ತಲೆಕೆಡಿಸಿ ಬಿಡುತ್ತಾನೆ. ಅದಕ್ಕಾಗಿಯೇ ``Reality Distortion" ಎಂದು ದೂರುತ್ತಾರೆ. ಆದರೇನಂತೆ ಹುಚ್ಚುಭ್ರಮೆ ಎನಿಸುವುದನ್ನೂ ವಾಸ್ತವಕ್ಕಿಳಿಸುವ ಆತನನ್ನು ನಿರ್ಲಕ್ಷಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ.

"Think Different''The people who are crazy enough to think they can change the world are the ones who do!!

ಈ ರೀತಿ ಸಾಗುವ ``ಆಪಲ್" ಕಂಪನಿಯ ಜಾಹೀರಾತು ಆತನ ಮನೋಬಲದ ಪ್ರತಿಬಿಂಬವೇ ಆಗಿದೆ. 1997ರಲ್ಲಿ ಆತ ರೂಪಿಸಿದ `ಐ-ಮ್ಯಾಕ್' ಕಂಪ್ಯೂಟರ್ ಜಗತ್ತಿನ ಅತ್ಯಂತ ಹಗುರವಾದ ಪಿಸಿ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, 2001ರಲ್ಲಿ ಹೊರತಂದ ``ಐ-ಪಾಡ್" ಸಂಗೀತವನ್ನು ಆಲಿಸುವ ಪ್ರಕ್ರಿಯೆಗೇ ಹೊಸ ಅರ್ಥ ನೀಡಿತು. ಇದುವರೆಗೂ 11 ಕೋಟಿ ಐ-ಪಾಡ್‌ಗಳು ಖರ್ಚಾಗಿವೆ. ಅದರ ಬೆನ್ನಲ್ಲೇ ಪ್ರಾರಂಭವಾದ ``ಐ-ಟ್ಯೂನ್ಸ್ ಸ್ಟೋರ್"ಗಳಿಂದ 400 ಕೋಟಿ ಹಾಡುಗಳು ಖರೀದಿಯಾಗಿವೆ!! 2007ರಲ್ಲಿ ದೂರಸಂಪರ್ಕ ಕ್ಷೇತ್ರಕ್ಕೂ ಕಾಲಿರಿಸಿದ ಆತ ಹೊರತಂದ ``ಐ-ಫೋನ್"(ಮೊಬೈಲ್) ಖರೀದಿಸಲು ಅಮೆರಿಕನ್ನರು ಹಿಂದಿನ ದಿನದಿಂದಲೇ ಸಾಲುಗಟ್ಟಿ ನಿಂತಿದ್ದರು. ಅಂದು 599 ಡಾಲರ್‌ಗೆ ನೀಡಿದ್ದ ಫೋನ್‌ಗಳನ್ನು ಮೊನ್ನೆ ಜೂನ್ 10ರಂದು 199 ಡಾಲರ್‌ಗೆ ಮಾರುಕಟ್ಟೆಗೆ ಬಿಟ್ಟಿದ್ದಾನೆ. ಭಾರತದಲ್ಲೂ ಅತ್ಯಂತ ಕಾತರದಿಂದ ಕಾಯುತ್ತಿರುವ ಮೊಬೈಲ್ ಎಂದರೆ ಐ-ಫೋನ್. ಬರುವ ಆಗಸ್ಟ್‌ನಲ್ಲಿ ಐ-ಫೋನ್ ಭಾರತದಲ್ಲೂ ಬಿಡುಗಡೆಯಾಗಲಿದ್ದು ನಮ್ಮಲ್ಲಿನ ಮುಂಚೂಣಿ ಮೊಬೈಲ್ ಕಂಪನಿಗಳಾದ ನೋಕಿಯಾ, ಸೋನಿ ಎರಿಕ್‌ಸನ್ ಹಾಗೂ ಮೋಟೊರೊಲಾ ಕಂಪನಿಗಳು ಮಳೆಗಾಲದಲ್ಲೂ ಬೆವರಲು ಆರಂಭಿಸಿವೆ!

ಇದು ಉತ್ಪ್ರೇಕ್ಷೆಯ ಮಾತಲ್ಲ. ಪ್ರಾರಂಭದಲ್ಲಿ ದುಬಾರಿ ಎನಿಸಿದ್ದ ಐ-ಪೋನ್‌ನ ಬೆಲೆಯನ್ನು ಮೂರನೇ ಎರಡು ಭಾಗದಷ್ಟು ಕಡಿತಗೊಳಿಸಿರುವುದರಿಂದ ಸಾಮಾನ್ಯ ಜನರೂ ಖರೀದಿಸಬಹುದಾಗಿದೆ. ``3ಜಿ ನೆಟ್‌ವರ್ಕ್"ನಿಂದಾಗಿ ಇಂಟರ್‌ನೆಟ್ ಅನ್ನು ಜಾಲಾಡುವುದು ತೀರಾ ಸರಳ ಹಾಗೂ ಸುಲಭವಾಗಲಿದೆ. ಐ-ಫೋನ್‌ನಲ್ಲೇ ಐ-ಪಾಡ್ ಕೂಡ ಇರುವುದರಿಂದ ಸಂಗೀತವನ್ನು ಉತ್ಕೃಷ್ಟ ಸ್ತರದಲ್ಲಿ ಕೇಳಬಹುದು. ಇಂತಹ ಸಾಧನೆಯನ್ನು ಗುರುತಿಸಿರುವ ಖ್ಯಾತ ``ಬ್ಲೆಂಡರ್" ಮ್ಯಾಗಝಿನ್, ಜಾಬ್ಸ್ ಅವರನ್ನು ಪ್ರಪಂಚದ ಅತ್ಯಂತ ಪ್ರಭಾವಿ ವ್ಯಕ್ತಿ ಎಂದಿದೆ. ಎಪ್ಪತ್ತೈದು ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿ ಅಂತಹ ಬಿರುದು ನೀಡಿದೆ. 'The undisputed king of the online music revolution', 'Technology trendsetter' ಎಂದು ಮ್ಯಾಗಝಿನ್‌ನ ಸಂಪಾದಕ ಕ್ರೇಗ್ ಮಾರ್ಕ್ಸ್ ಶ್ಲಾಘಿಸಿದ್ದಾರೆ. ``MySpace"ನ ಸ್ಥಾಪಕ ಟಾಮ್ ಆಂಡರ್‌ಸನ್, ``YouTube" ಸೃಷ್ಟಿಕರ್ತರಾದ ಚಾಡ್ ಹರ್ಲೆ ಮತ್ತು ಸ್ಟೀವ್ ಚೆನ್ ಅವರು ನಂತರದ ಸ್ಥಾನದಲ್ಲಿದ್ದಾರೆ ಎಂದರೆ ಜಾಬ್ಸ್ ಎಂತಹ ಸಾಧಕನಿರಬಹುದು?!

ಸತ್ತೆನೆಂದೆನಬೇಡ, ಸೋತೆನೆಂದೆನಬೇಡ
ಬತ್ತಿತೆನ್ನೊಳು ಸತ್ವದೂಟೆ
ಎನಬೇಡಮೃತ್ಯುವೆನ್ನುವುದೊಂದು ತೆರೆ ಇಳಿತ..!
ತೆರೆ ಏರು, ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ...

ಇಂದು ಸ್ಟೀವ್ ಜಾಬ್ಸ್ ಹೆಸರು ಕೇಳಿದರೆ ಜಗತ್ತೇ ರೋಮಾಂಚನಗೊಳ್ಳುತ್ತಿರಬಹುದು. ಆದರೆ ಆತನ ಬದುಕಿನ ಪುಟಗಳನ್ನು ತಿರುವುತ್ತಾ ಹೋದರೆ ಈ ಮೇಲಿನ ಡಿವಿಜಿ ಕವನ ನೆನಪಾಗುತ್ತದೆ. ಅವನ ಹುಟ್ಟೇ ಒಂದು ದುರಂತ. ಅವಿವಾಹಿತಳಾಗಿದ್ದ ಅಮ್ಮ ಕಾಲೇಜಿಗೆ ಹೋಗುತ್ತಿರುವಾಗಲೇ ಗರ್ಭ ಧರಿಸಿದ್ದಳು. ಹಾಗಾಗಿ ಮಗು ಹೊಟ್ಟೆಯಲ್ಲಿರುವಾಗಲೇ ದತ್ತು ನೀಡುವ ನಿರ್ಧಾರಕ್ಕೆ ಬಂದಳು. ಆದರೆ ಆಕೆಯದ್ದೊಂದು ಪೂರ್ವ ಷರತ್ತಿತ್ತು. ಮಗುವನ್ನು ದತ್ತು ಸ್ವೀಕರಿಸುವ ಪೋಷಕರಿಬ್ಬರೂ ಕಾಲೇಜು ಪದವೀಧರರಾಗಿರಬೇಕು. ವಿದ್ಯಾವಂತ ಪೋಷಕರು ದೊರೆತರೆ ತನ್ನ ಮಗುವನ್ನೂ ಕಾಲೇಜು ವ್ಯಾಸಂಗ ಮಾಡಿಸುತ್ತಾರೆ ಎಂಬ ನಂಬಿಕೆ ಆಕೆಯದ್ದು. ಪದವೀಧರ ದಂಪತಿಯೊಬ್ಬರು ಮಗುವನ್ನು ದತ್ತು ಸ್ವೀಕರಿಸಲು ಮುಂದೆ ಬಂದರು. ಆದರೆ ಅವರಿಗೆ ಬೇಕಿದ್ದು ಹೆಣ್ಣು ಮಗು. ಹುಟ್ಟಿದ್ದು ಗಂಡುಮಗು. ಹುಟ್ಟಿದ ಕ್ಷಣದಲ್ಲೇ ಮಗು ಅನಾಥವಾಯಿತು. ಆದರೇನಂತೆ ಜಸ್ಟಿನ್ ಹಾಗೂ ಕ್ಲಾರಾ ಜಾಬ್ಸ್ ಎಂಬ ಕ್ಯಾಲಿಫೋರ್ನಿಯಾದ ದಂಪತಿಯೊಬ್ಬರು ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾದರು. ಆದರೆ ಅವರು ಪದವೀಧರರಾಗಿರಲಿಲ್ಲ. ಹಾಗಾಗಿ ದತ್ತು ನೀಡಲು ಒಪ್ಪಲಿಲ್ಲ. ಕೊನೆಗೂ ಹರಸಾಹಸ ಮಾಡಿ, ಮನವೊಲಿಸಿದ ಜಾಬ್ಸ್ ದಂಪತಿಗಳು ಮಗುವನ್ನು ದತ್ತು ತೆಗೆದುಕೊಂಡು ಸ್ಟೀವನ್ ಪೌಲ್ ಜಾಬ್ಸ್ ಎಂಬ ಹೆಸರಿಟ್ಟರು. ಹದಿನೇಳನೇ ವರ್ಷಕ್ಕೆ ಕಾಲೇಜು ಮೆಟ್ಟಿಲು ತುಳಿದ ಸ್ಟೀವ್ ಜಾಬ್ಸ್‌ಗೆ ಓದು ರುಚಿಸಲಿಲ್ಲ. ಕಾಲೇಜನ್ನು ಅರ್ಧಕ್ಕೇ ಬಿಟ್ಟ ಆತನಿಗೆ ಒಪ್ಪೊತ್ತಿನ ಊಟಕ್ಕೂ ಕುತ್ತು ಬಂತು. ಆದರೇನಂತೆ ಭಾನುವಾರ ಮಾತ್ರ `ಫುಲ್ ಮೀಲ್ಸ್' ದೊರೆಯುತ್ತಿತ್ತು! ಕಾಲೇಜಿನಿಂದ 7 ಕಿ.ಮೀ. ದೂರದಲ್ಲಿದ್ದ ಹರೇ ಕೃಷ್ಣ ದೇವಾಲಯದಲ್ಲಿ ಪ್ರತಿ ಭಾನುವಾರ ಉಚಿತ ಊಟ ನೀಡಲಾಗುತ್ತಿತ್ತು. ಆ ಊಟಕ್ಕಾಗಿ 7 ಕಿ.ಮೀ. ನಡೆದು ಹೋಗುತ್ತಿದ್ದ. ಆತ ಹೋಗಿದ್ದು ಹೊಟ್ಟೆತುಂಬಿಸುವ ಊಟಕ್ಕಾದರೂ ಊಟಕ್ಕಿಂತ ಆಧ್ಯಾತ್ಮ ರುಚಿಸತೊಡಗಿತು. ಆಧ್ಯಾತ್ಮವನ್ನು ಅರಸಿಕೊಂಡು ಭಾರತಕ್ಕೂ ಭೇಟಿ ನೀಡಿದ. ಭಾರತದಿಂದ ವಾಪಸ್ಸಾದ ಜಾಬ್ಸ್, ಅಟಾರಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಸ್ಟೀವ್ ವೋಝ್ನಿಯಾಕ್ ಪರಿಚಯವಾಗಿದ್ದು ಅಲ್ಲೇ. ಆತ ಮಹಾಬುದ್ಧಿವಂತ. ತಾಂತ್ರಿಕ ವಿಷಯಗಳಲ್ಲಿ ಪರಿಣತ. ಇತ್ತ ಜಾಬ್ಸ್ ಕೂಡ ತಾಂತ್ರಿಕ ವಿಷಯದಲ್ಲಿ ಉತ್ತಮ ಜ್ಞಾನ ಹೊಂದಿದ್ದರೂ ಮಾರ್ಕೆಟಿಂಗ್‌ನಲ್ಲಿ ಪಂಟ.ಇವರಿಬ್ಬರೂ ಸೇರಿ 1976, ಏಪ್ರಿಲ್ 1ರಂದು ಆರಂಭಿಸಿದ್ದೇ ``ಆಪಲ್ ಕಂಪ್ಯೂಟರ್"!

ಆಗ ಜಾಬ್ಸ್‌ಗೆ ಕೇವಲ 21 ವರ್ಷ. ಆಪಲ್ ಪ್ರಾರಂಭವಾಗಿದ್ದು ಜಾಬ್ಸ್‌ನ ಮನೆಯ ಗ್ಯಾರೇಜ್‌ನಲ್ಲಿ. ಆದರೇನಂತೆ ಯಶಸ್ಸು ಅರಸಿಕೊಂಡು ಬಂತು. ಆಪಲ್ ರೂಪಿಸಿದ ಆಪಲ್-1, ಆಪಲ್-2 ಕಂಪ್ಯೂಟರ್‌ಗಳು ಕಂಪನಿಗೆ ಒಳ್ಳೆಯ ಹೆಸರು, ಹಣ ತಂದುಕೊಟ್ಟವು. ಈ ಮಧ್ಯೆ 1981ರಲ್ಲಿ ನಡೆದ ವಿಮಾನ ದುರ್ಘಟನೆಯೊಂದರಲ್ಲಿ ವೋಝ್ನಿಯಾಕ್ ಗಾಯಗೊಂಡರು. ಹಾಗಾಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ(ಸಿಇಓ) ಜಾಬ್ಸ್ ಜವಾಬ್ದಾರಿ ವಹಿಸಿಕೊಂಡರು. ಹಾಗೆ ಅಧಿಕಾರ ವಹಿಸಿಕೊಂಡ ಜಾಬ್ಸ್‌ಗೆ ಕಂಪನಿಯನ್ನು ಇನ್ನೂ ವಿಸ್ತಾರಗೊಳಿಸಲು, ಯಶಸ್ಸಿನತ್ತ ಕೊಂಡೊಯ್ಯಲು ಸೂಕ್ತ ವ್ಯಕ್ತಿಯೊಬ್ಬರ ಸಾಥ್ ಬೇಕೆನಿಸತೊಡಗಿತು. ಆಗ ಕಣ್ಣಿಗೆ ಕಂಡಿದ್ದೇ ಪೆಪ್ಸಿ ಕಂಪನಿಯ ಸಿಇಓ ಜಾನ್ ಸ್ಕೂಲಿ. ಆದರೆ ಪೆಪ್ಸಿಯಂತಹ ಕಂಪನಿಯನ್ನು ಬಿಟ್ಟು ಯಾರು ತಾನೇ ಆಪಲ್‌ನಂತಹ ಅದಾಗತಾನೇ ಹೊರಹೊಮ್ಮುತ್ತಿರುವ ಕಂಪನಿಗೆ ಬರುತ್ತಾರೆ? ಹಾಗಂತ ಜಾಬ್ಸ್ ಸುಮ್ಮನಾಗಲಿಲ್ಲ. ಸ್ಕೂಲಿಯನ್ನು ಮನವೊಲಿಸಲು ಮುಂದಾದ. Do you want to spend the rest of your life selling sugared water, or do you want a chance to change the world? ಎಂಬ ಜಾಬ್ಸ್‌ನ ಮಾತುಗಳು ಸ್ಕೂಲಿಯನ್ನು ಯಾವ ರೀತಿ ಪ್ರಚೋದಿಸಿದವೆಂದರೆ ಪೆಪ್ಸಿ ಕಂಪನಿ ಬಿಟ್ಟ ಸ್ಕೂಲಿ 1983ರಲ್ಲಿ ಆಪಲ್ ಸೇರಿಬಿಟ್ಟ. 1984ರಲ್ಲಿ ಆಪಲ್ ಕಂಪನಿ ಅತ್ಯಂತ ಆಕರ್ಷಕ ಟಿವಿ ಜಾಹೀರಾತೊಂದನ್ನು ಹೊರತಂದಿತು. ಇದಾಗಿ ಎರಡು ದಿನಗಳಲ್ಲೇ ಅಂದರೆ 1984, ಜನವರಿ 24ರಂದು ನಡೆದ ಆಪಲ್ ಕಂಪನಿಯ ಷೇರುದಾರರ ಸಭೆಯಲ್ಲಿ ಜಾಬ್ಸ್ `ಮ್ಯಾಕಿಂತೋಷ್' (ಪಿಸಿ) ಕಂಪ್ಯೂಟರನ್ನು ಅನಾವರಣಗೊಳಿಸಿದರು. ನಾವು ಬಳಸುವ `ಮೌಸ್' ಮೊದಲಿಗೆ ಬಳಕೆಗೆ ಬಂದಿದ್ದೇ ಮ್ಯಾಕಿಂತೋಷ್‌ನೊಂದಿಗೆ! ಇಂತಹ ನವೀನ ಸಂಶೋಧನೆಯಿಂದಾಗಿ ಆಪಲ್ 2 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿತು. ಈ ನಡುವೆ ಜಾಬ್ಸ್ ಮತ್ತು ಸ್ಕೂಲಿ ನಡುವೆ ಭಿನ್ನಾಭಿಪ್ರಾಯ ಕಾಣಿಸತೊಡಗಿತು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ಆಡಳಿತ ಮಂಡಳಿಯ ಸದಸ್ಯರು ಸ್ಕೂಲಿ ಪರ ನಿಂತ ಕಾರಣ ಕಂಪನಿಯ ಸ್ಥಾಪಕನಾದ ಜಾಬ್ಸ್‌ನನ್ನೇ ಹೊರಹಾಕಲಾಯಿತು!

ಅವನ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಸಿಟ್ಟಿಗೆದ್ದು ಯಾರನ್ನಾದರೂ ಕೊಲ್ಲುತ್ತಿದ್ದರು, ಇಲ್ಲವೇ ಹುಚ್ಚರಾಗುತ್ತಿದ್ದರು. ಆದರೆ ಅಂತಹ ಆಘಾತದಿಂದಲೂ ಸಾವರಿಸಿಕೊಂಡ ಜಾಬ್ಸ್ ``ನೆಕ್ಸ್ಟ್"ಎಂಬ ಕಂಪನಿ ಪ್ರಾರಂಭಿಸಿದ. ಅಲ್ಲದೆ ಜಾರ್ಜ್ ಲುಕಾಸ್ ಎಂಬುವವರಿಂದ ``ಪಿಕ್ಸರ್" ಎಂಬ ಡಿಜಿಟಲ್ ಗ್ರಾಫಿಕ್ಸ್ ಕಂಪನಿಯನ್ನೂ ಖರೀದಿ ಮಾಡಿದ. ಆ ಕಂಪನಿ Toy Story ಎಂಬ ಆನಿಮೇಷನ್ ಚಿತ್ರವನ್ನು ರೂಪಿಸಿತು. ಅದು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿತು. ಕಂಪನಿಗೂ ಒಳ್ಳೆಯ ಹೆಸರು ಬಂತು. ಇದನ್ನು ಗಮನಿಸಿದ ವಿಶ್ವವಿಖ್ಯಾತ `ಡಿಸ್ನಿ' ಕಂಪನಿ 7.4 ಶತಕೋಟಿ ಡಾಲರ್ ಕೊಟ್ಟು `ಪಿಕ್ಸರ್' ಅನ್ನೇ ಖರೀದಿ ಮಾಡಿತು. ಸ್ಟೀವ್ ಜಾಬ್ಸ್‌ನ ಗ್ರಹಗತಿಯೇ ಬದಲಾಯಿತು. ಇತ್ತ ಜಾಬ್ಸ್ ಅನುಪಸ್ಥಿತಿಯಲ್ಲಿ ಐಬಿಎಂ, ಮೈಕ್ರೊಸಾಫ್ಟ್‌ಗಳ ಜತೆ ಸ್ಪರ್ಧೆ ಮಾಡಲಾಗದೆ, ಹೊಸ ಹೊಸ `ಆಪರೇಟಿಂಗ್ ಸಿಸ್ಟಮ್'ಗಳನ್ನು ಹೊರತರಲಾಗದೆ ಆಪಲ್ ಕಂಪನಿ ನಷ್ಟ ಅನುಭವಿಸಲಾರಂಭಿಸಿತು. ಮತ್ತೆ ಆಪಲ್ ತಲೆಯೆತ್ತಬೇಕಾದರೆ ಜಾಬ್ಸ್‌ನ `ನೆಕ್ಸ್ಟ್' ಕಂಪನಿಯ ಜತೆ ಕೈಜೋಡಿಸುವುದು ಮಾತ್ರವಲ್ಲ, ಜಾಬ್ಸ್‌ನ ನಾಯಕತ್ವದ ಅಗತ್ಯವೂ ಅನಿವಾರ್ಯವಾಯಿತು!! 1997ರಲ್ಲಿ ನೆಕ್ಸ್ಟ್ ಕಂಪನಿಯನ್ನು ಖರೀದಿ ಮಾಡಿದ ಆಪಲ್, ಜಾಬ್ಸ್ ಅವರನ್ನೇ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿತು!!

ಆಪಲ್‌ಗೆ ಹಿಂದಿರುಗಿದ ಜಾಬ್ಸ್ "Mac OS X" ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಹೊರತರುವ ಮೂಲಕ ಕಂಪನಿಗೆ ಮತ್ತೆ ಜೀವ ತುಂಬಲಾರಂಭಿಸಿದ. ಆನಂತರ ಐಮ್ಯಾಕ್ ಬಂತು, ಐಪಾಡ್, ಐಟ್ಯೂನ್‌ನೊಂದಿಗೆ ಸಂಗೀತ ಕ್ಷೇತ್ರಕ್ಕೂ ಕಾಲಿರಿಸಿದ. ಅಲ್ಲದೆ ಈಚೆಗೆ ಆತ ಹೊರತಂದ ಐಫೋನ್ ವರ್ಷ ತುಂಬುವುದಕ್ಕೂ ಮೊದಲೇ ಜಗತ್ತಿನ ಮೆಚ್ಚುಗೆ ಗಳಿಸಿದೆ, ಮೊಬೈಲ್ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದಿದೆ. ಇವತ್ತು ಜಾಬ್ಸ್ ಮಾಡುವ ಭಾಷಣಗಳು ``Stevenotes" ಎಂದೇ ಪ್ರಸಿದ್ಧಿಯಾಗುತ್ತಿವೆ. ಆತ ಕಾಲೇಜು ಓದದಿದ್ದರೇನಂತೆ, ಜಗತ್ತಿನ ಅತ್ಯುತ್ತಮ ಕಾಲೇಜುಗಳು ಜಾಬ್ಸ್‌ನನ್ನು ಉಪನ್ಯಾಸಕ್ಕಾಗಿ ಕರೆಯುತ್ತಿವೆ. ಅಂತಹ ಕಾಲೇಜುಗಳಲ್ಲಿ ವಿಶ್ವವಿಖ್ಯಾತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವೂ ಒಂದು. 2005, ಜೂನ್ 12ರಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ನಿಂತ ಜಾಬ್ಸ್, ``ಜಗತ್ತಿನ ಅತ್ಯುತ್ತಮ ವಿವಿಗಳಲ್ಲಿ ಒಂದಾದ ಸ್ಟ್ಯಾನ್‌ಫೋರ್ಡ್‌ನ ವಿದ್ಯಾರ್ಥಿಗಳಾದ ನಿಮ್ಮನ್ನುದ್ದೇಶಿಸಿ ಮಾತನಾಡುವ ಅವಕಾಶ ದೊರೆತಿರುವುದು ನನಗೆ ಸಂದ ದೊಡ್ಡ ಗೌರವ. ಆದರೆ ನಾನೆಂದೂ ಕಾಲೇಜಿನಿಂದ ಪದವಿ ಪಡೆದು ಹೊರಹೋದವನಲ್ಲ. ಇಂದು ನಾನು ನಿಮಗೆ ನನ್ನ ಜೀವನದ ಮೂರು ಕಥೆಗಳನ್ನು ಹೇಳಲು ಬಯಸುತ್ತೇನೆ. ಅವುಗಳಲ್ಲಿ ವಿಶೇಷವೇನಿಲ್ಲ. ಬರೀ ಮೂರು ಕಥೆಗಳಷ್ಟೆ...."

ಅಂದು ಆತ ಹೇಳಿದ ಮೊದಲ ಕಥೆ ಆತನ ದತ್ತು ಸ್ವೀಕಾರ ಹಾಗೂ ಕಾಲೇಜಿಗೆ ತಿಲಾಂಜಲಿ ಇತ್ತ ಘಟನೆಯ ಬಗ್ಗೆ. ಎರಡನೆಯದ್ದು ತಾನೇ ಪ್ರಾರಂಭಿಸಿದ ಕಂಪನಿಯಿಂದ ತನ್ನನ್ನೇ ಕಿತ್ತೊಗೆದಿದ್ದು ಹಾಗೂ ಅದನ್ನು ಸವಾಲಿನಂತೆ ತೆಗೆದುಕೊಂಡು ಪರಿಸ್ಥಿತಿಯನ್ನು ಎದುರಿಸಿದ ಘಟನೆಗೆ ಸಂಬಂಧಿಸಿದ್ದು. ಮೂರನೆಯದ್ದನ್ನು ಅವರ ಮಾತಿನಲ್ಲೇ ಕೇಳೋಣ.

``ಇದೇ ನಿನ್ನ ಕೊನೆಯ ದಿನ ಎಂಬಂತೆ ನೀನು ಪ್ರತಿದಿನವನ್ನೂ ಕಳೆದರೆ ಒಂದಲ್ಲ ಒಂದು ದಿನ ಅದು ನಿಜವಾಗುತ್ತದೆ ಎಂಬ ಯಾರೋ ಹೇಳಿದ್ದ ಮಾತು 17 ವರ್ಷದವನಾಗಿದ್ದ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು. ಆನಂತರ ಪ್ರತಿದಿನವೂ ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು, ಇವತ್ತೇ ನನ್ನ ಜೀವಮಾನದ ಕಡೆಯ ದಿನ ಎಂದಾಗಿದ್ದರೆ ಇಂದು ಮಾಡಲು ಹೊರಟಿರುವ ಕೆಲಸವನ್ನು ಮಾಡುತ್ತಿದ್ದೆನೇ? ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ಅಷ್ಟಕ್ಕೂ ಸಾವು ಎದುರಿಗೆ ನಿಂತಿದ್ದಾಗ ಎಲ್ಲವೂ ನಗಣ್ಯವಾಗಿ ಬಿಡುತ್ತದೆ. ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಬಂದಿರುವುದು ಪತ್ತೆಯಾಯಿತು. ಬೆಳಗ್ಗೆ 7.30ಕ್ಕೆ ವೈದ್ಯಕೀಯ ತಪಾಸಣೆ ನಡೆಯಿತು. ಅದರಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಸ್ಪಷ್ಟವಾಗಿ ಗೋಚರಿಸಿತು. ಅದು ವಾಸಿಯಾಗದ ವಿಧದ ಕ್ಯಾನ್ಸರ್ ಆಗಿತ್ತು. ಆರು ತಿಂಗಳಿಗಿಂತ ಹೆಚ್ಚು ಕಾಲ ನಾನು ಬದುಕುವುದಿಲ್ಲ ಎಂದು ವೈದ್ಯರು ಹೇಳಿಯೂ ಬಿಟ್ಟರು. ಮನೆಗೆ ಹೋಗಿ ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಿಬಿಡು ಎಂದ ಸಲಹೆ ನೀಡಿದರು. ವೈದ್ಯರು ನಮ್ಮನ್ನು ಸಾವಿಗೆ ಅಣಿಗೊಳಿಸುವುದೇ ಹಾಗೆ. ಅಂದರೆ ನಿನ್ನ ಹೆಂಡತಿ, ಮಕ್ಕಳ ಜತೆ ಏನೇನು ಮಾತನಾಡಿಕೊಳ್ಳಬೇಕು ಅದನ್ನೆಲ್ಲ ಮಾತಾಡಿ ಮುಗಿಸು, ಅವರ ಭವಿಷ್ಯಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡು, ನೀನು ಸತ್ತ ನಂತರವೂ ಅವರು ಖುಷಿಯಿಂದ ಇರಲು ಬೇಕಾದ ಮುಂಜಾಗ್ರತೆಗಳನ್ನು ತೆಗೆದುಕೋ ಅಂತ. ಆದರೆ ಕ್ಯಾನ್ಸರ್ ಬಂದಿರುವ ವಿಚಾರ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು. ಅದೇ ದಿನ ಸಂಜೆ ವೇಳೆಗೆ ಬಯಾಪ್ಸಿ ಮಾಡಿದರು. ಸೂಜಿ ಹಾಕಿ ಕ್ಯಾನ್ಸರ್ ಗಡ್ಡೆಯ ಕೆಲವು ಸೆಲ್‌ಗಳನ್ನು ಹೊರತೆಗೆದು, ಪರೀಕ್ಷಿಸಿದರು. ಅದೃಷ್ಟವಶಾತ್, ಅದು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದಾದ ಕ್ಯಾನ್ಸರ್ ಆಗಿತ್ತು! ಅಂದು ನಾನು ಸಾವನ್ನು ಮುಟ್ಟಿನೋಡಿ ಬಂದಿದ್ದೆ!

ಅಂತಹ ಅನುಭವದ ಬಲದಿಂದ ಹೇಳುವುದಾದರೆ ಸಾವು ಕೂಡ ಒಂದು ಉಪಯುಕ್ತ ಅನುಭವ. ಆದರೆ ಅದು ಬುದ್ಧಿಗೆ ಮಾತ್ರ ನಿಲುಕುವಂಥದ್ದು. ಅಷ್ಟಕ್ಕೂ ಯಾರೂ ಸಾಯಲು ಬಯಸುವುದಿಲ್ಲ. ಸ್ವರ್ಗಕ್ಕೆ ಹೋಗಬೇಕು ಎಂದು ಬಯಸುವವರೂ ಸಾಯಲು ಇಷ್ಟಪಡುವುದಿಲ್ಲ. ಆದರೆ ನಾವೆಲ್ಲ ಸೇರುವ ಅಂತಿಮ ತಾಣ ಸಾವು. ಇದುವರೆಗೂ ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ಅದು ಹಾಗೆಯೇ ಇರಬೇಕು. Death is very likely the single best invention of Life! ಜೀವನದಲ್ಲಿ ಸಾವು ಬದಲಾವಣೆಯ ಏಜೆಂಟ್. ಹಳಬರನ್ನು ಜಾಗ ಖಾಲಿ ಮಾಡಿಸಿ, ಹೊಸಬರಿಗೆ ಅವಕಾಶ ಮಾಡಿಕೊಡುತ್ತದೆ. ಇವತ್ತು ನೀವು ಹೊಸಬರು. ಆದರೆ ಮುಂದೊಂದು ದಿನ ನೀವು ಕೂಡ ಹಳಬರಾಗಿ ಜಾಗ ಖಾಲಿ ಮಾಡಬೇಕಾಗುತ್ತದೆ! ನಿಮಗಿರುವ ಅವಧಿ ತೀರಾ ಕ್ಷಣಿಕ. ಬೇರೆಯವರಿಗಾಗಿ ನಿಮ್ಮ ಬದುಕನ್ನು ಸವೆಸಿ ಆ ಸಮಯವನ್ನು ವ್ಯರ್ಥ ಮಾಡಬೇಡಿ. ಯಾವುದೋ ಸಿದ್ಧಾಂತಕ್ಕೆ ಸಿಕ್ಕಿಬಿದ್ದು ಬೇರೊಬ್ಬರ ಚಿಂತನೆಗಳ ಬಗ್ಗೆ ಚಿಂತೆ ಮಾಡುತ್ತಾ ಚಿತೆ ಏರಬೇಡಿ. ಇತರರ ಗದ್ದಲ ನಿಮ್ಮ ಅಂತರಾತ್ಮದ ಧ್ವನಿಯನ್ನು ಹೊಸಕಿಹಾಕಲು ಬಿಡಬೇಡಿ. ನಿಮ್ಮ ಮನಸ್ಸು ಮತ್ತು ಅಂತಃಧ್ವನಿಯನ್ನು ಹಿಂಬಾಲಿಸಿ. ನೀವೇನಾಗಬೇಕು ಎಂಬುದು ನಿಮ್ಮ ಅಂತರಾತ್ಮಕ್ಕೆ ಚೆನ್ನಾಗಿ ಗೊತ್ತಿರುತ್ತದೆ. ನಾನು ಪ್ರಾಪ್ತವಯಸ್ಕನಾಗಿದ್ದಾಗ "The Whole Earth Catalog'' ಎಂಬ ಅದ್ಭುತ ಪುಸ್ತಕವೊಂದಿತ್ತು. ನನ್ನ ತಲೆಮಾರಿನವರ ಬೈಬಲ್ ಅದಾಗಿತ್ತು. ಆದರೆ ಕಾಲಾಂತರದಲ್ಲಿ ಅದು ಕಾಲಗರ್ಭದಲ್ಲಿ ಸೇರುವ ಸಮಯ ಬಂತು. 1970ರ ದಶಕದ ಮಧ್ಯ ಭಾಗದಲ್ಲಿ "The Whole Earth Catalog''ನ ಕೊನೆಯ ಪ್ರಕಟಣೆ ಹೊರಬಿತ್ತು. ಅದರ ಹಿಂಬದಿಯ ಪುಟದ ಮೇಲೆ ಹಳ್ಳಿಯ ರಸ್ತೆಯೊಂದರ ಮುಂಜಾವಿನ ಫೋಟೊ ಇತ್ತು. ಅದರ ಮೇಲೆ ವಿದಾಯದ ಒಕ್ಕಣೆಯೊಂದಿತ್ತು- Stay Hungry, Stay Foolish! ನಾನು ನಿಮಗೆ ಹಾರೈಸುವುದೂ ಅದನ್ನೇ - Stay Hungry, Stay Foolish! ಮನದ ತುಂಬ ಕಲಿಕೆಯ ಹಸಿವಿರಲಿ, ಮನದಾಸೆಯಂತೆ ನಡೆದುಕೊಳ್ಳಿರಿ".

ಜಾಬ್ಸ್ ಭಾಷಣದಲ್ಲಿ ನಮಗೂ ಒಂದು ಕಿವಿಮಾತಿದೆ. ಕಾಲೇಜು ಓದದ ಜಾಬ್ಸ್ ಇಷ್ಟೆಲ್ಲಾ ಮಾಡಬಹುದಾಗಿದ್ದರೆ ಮಾರ್ಕ್ಸ್ ಕಡಿಮೆ ಬಂತು, ಫೇಲಾಯಿತು ಅಂತ ನೇಣುಹಾಕಿಕೊಳ್ಳುವ ನಾವೇಕೆ ಜೀವನವನ್ನು ಸಕಾರಾತ್ಮಕವಾಗಿ ನೋಡಬಾರದು? ಸೋಲನ್ನೇಕೆ ಸವಾಲಾಗಿ ಸ್ವೀಕರಿಸಬಾರದು? ಜಾಬ್ಸ್‌ನಂತೆ ಸಾವಿರಾರು ಜನರಿಗೆ ಉದ್ಯೋಗ ನೀಡಿ ಅವರ ಬದುಕನ್ನು ಬದಲಾಯಿಸಲಾಗದಿದ್ದರೂ ಕನಿಷ್ಠ ನಮ್ಮ ಬದುಕು ಮತ್ತು ಭವಿಷ್ಯವನ್ನಾದರೂ ಹಸನಾಗಿಸಿಕೊಳ್ಳಬಹುದಲ್ಲವೆ? ಆದರೆ ಅದಕ್ಕೆ ಕಲಿಯುವ ಹಸಿವು, ಏನಾದರೂ ಮಾಡಬೇಕೆಂಬ ಹಂಬಲ, ಯಾರನ್ನೂ ಲೆಕ್ಕಿಸದೆ ತೋಚಿದ್ದನ್ನು ಸಾಧಿಸುವ ಎದೆಗಾರಿಕೆ ಬೇಕು. ಅದಕ್ಕೇ ಜಾಬ್ಸ್ ಹೇಳಿದ್ದು Stay Hungry, Stay Foolish!

ಅಂಕಣಕಾರ : ಪ್ರತಾಪ್ ಸಿಂಹ
ಸಂಗ್ರಹ : ರವಿ ಎನ್ ರಾವ್

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು