Thursday, June 25, 2009

CyberCrime

ಸಾಮಾಜಿಕ ಪಿಡುಗಾಗಿ ಪರಿಣಮಿಸುತ್ತಿರುವ ಸೈಬರ್ ಕ್ರೈಂ

ಮನುಷ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರಿದಂತೆ ಜನಸಾಮಾನ್ಯರಿಗೆ ಅರ್ಥವಾಗದ, ಕಾನೂನಿನ ಚೌಕಟ್ಟಿಗೂ ಬಾರದಿರುವ ಅನೇಕ ಅಪರಾಧಗಳು ಹೆಚ್ಚುತ್ತಿವೆ. ಅಂಥವುಗಳಲ್ಲಿ ಸೈಬರ್ ಅಪರಾಧವೂ ಒಂದು. ಸೈಬರ್ ಅಪರಾಧವನ್ನು ಕಟ್ಟಿಹಾಕಲು ಭಾರತ ಮಾಹಿತಿ ತಂತ್ರಜ್ಞಾನ ಅಧಿನಿಯಮ 2000 ಜಾರಿತಂದಿದೆ. ಈ ಕಾನೂನಿನಿಂದ ಸೈಬರ್ ಕ್ರೈಮನ್ನು ನಿಗ್ರಹಿಸುವಲ್ಲಿ ಎಷ್ಟು ಸಫಲತೆ ದಕ್ಕಿದೆ? ಜನಸಾಮಾನ್ಯರಿಗೆ ಈ ಅಪರಾಧದ ಬಗ್ಗೆ ತಿಳಿವಳಿಕೆಯಾದರೂ ಎಷ್ಟಿದೆ? ಸೈಬರ್ ಅಪರಾಧ ವಿಷಯದಲ್ಲಿ ಪರಿಣತಿ ಹೊಂದಿರುವ ನ್ಯಾಯವಾದಿ ಪ್ರಶಾಂತ್ ಮಿರ್ಲೆ ಈ ನೂತನ ಕಾನೂನಿನ ಬಗ್ಗೆ ತಿಳಿವಳಿಕೆ ನೀಡಲಿದ್ದಾರೆ. ಸೈಬರ್ ಅಪರಾಧ ಕುರಿತಂತೆ ಮಿರ್ಲೆ ಅವರೊಂದಿಗೆ ಓದುಗರು ಸಂವಾದಿಸಬಹುದು. - ಸಂಪಾದಕ.

ಮನುಷ್ಯ ತನ್ನ ಚಟುವಟಿಕೆಗಳಿಂದ ಎಲ್ಲಿಯವರೆಗೆ ಯಶಸ್ಸನ್ನು ಕಾಣುತ್ತಾ ಇರುತ್ತಾನೋ ಅಲ್ಲಿಯವರೆಗೆ ಅಪರಾಧಗಳು ಹೆಚ್ಚುತ್ತಲೇ ಇರುತ್ತವೆ. ಅಂತಯೇ, ಈ ಅಪರಾಧಗಳನ್ನು ನಿಯಂತ್ರಿಸುವ ಕೆಲಸ ಆಗಿಂದಾಗ್ಗೆ ಮಾಡುತ್ತಲೇ ಇರಬೇಕಾಗುತ್ತದೆ. ಇದಕ್ಕಾಗಿ ಕಾನೂನು ರಚನಾ ಇಲಾಖೆಗಳನ್ನು ಬಲಪಡಿಸಬೇಕಾಗುತ್ತದೆ ಮತ್ತು ಅಪರಾಧಗಳನ್ನು ಹಿಮ್ಮೆಟ್ಟಿಸಬೇಕಾಗುತ್ತದೆ. 1990ರ ಪೂರ್ವದಲ್ಲಿ ಸೈಬರ್ ಸ್ವೇಸನ್ನು ಸುಮಾರು ಒಂದು ಲಕ್ಷ ಜನರು ಬಳಸುತ್ತಿದ್ದರು. ಇಂದು 500 ಮಿಲಿಯನ್‌ಗಿಂತ ಹೆಚ್ಚು ಜನರು ಪ್ರಪಂಚದ ನಾನಾ ಭಾಗಗಳಿಂದ ಬಳಸುತ್ತಿದ್ದು ಒಂದು ರೀತಿ ಅನೈತಿಕ, ದಿವಾನಿ ಮತ್ತು ಅಪರಾಧಿಕ ತಪ್ಪುಗಳನ್ನು ಎಸಗುವ ತಾಣವಾಗಿರುತ್ತದೆ.

ಮಾಹಿತಿ ತಂತ್ರಜ್ಞಾನದ ವೃತ್ತಿಪರರಿಗೆ (ಸಾರ್ವಜನಿಕರಿಗೂ ಸಹ) ಸೈಬರ್ ಅಪರಾಧದ ಬಗ್ಗೆ ಯಾವಾಗ ಪೋಲಿಸರಿಗೆ ಮಾಹಿತಿಯನ್ನು ಕೊಡಬೇಕು ಅಥವಾ ಎಂತಹ ಮಾಹಿತಿಯನ್ನು ಒದಗಿಸಬೇಕು ಎಂಬುದರ ಬಗ್ಗೆ ತಿಳಿವಳಿಕೆ ನೀಡಬೇಕಾಗಿರುವುದು ಇಂದು ಅತಿ ಜರೂರಾಗಿದೆ. ಅಂತೆಯೇ, ಕಾನೂನು ರಚನೆಕಾರರು ಕೆಲವು ನಿರ್ದಿಷ್ಟ ಅಪರಾಧಗಳಿಗೆ ಶಿಕ್ಷಿಸಲು ಅವುಗಳನ್ನು ಕಾನೂನಿನಡಿಯಲ್ಲಿ ತರುವ ಅಗತ್ಯವಿದೆ. ವಾಸ್ತವವಾಗಿ ಕೆಲವು ಸೈಬರ್ ಅಪರಾಧಗಳು ಇನ್ನೂ ಕಾನೂನು ಪರಿಧಿಯಿಂದ ಹೊರಗುಳಿದಿದ್ದು ಸಮಾಜಕ್ಕೆ ಮಾರಕವಾಗಿವೆ.

ಪ್ರಾಥಮಿಕವಾಗಿ ಸೈಬರ್ ಅಪರಾಧ ಕುರಿತಂತೆ ಅಂತಾರಾಷ್ಟ್ರೀಯ ವ್ಯಾಪಾರ ಕಾನೂನಿನ ಸಂಯುಕ್ತ ರಾಷ್ಟ್ರಗಳ ಆಯೋಗವು ಅಂಗೀಕರಿಸಿದ ವಿದ್ಯುನ್ಮಾನ ವಾಣಿಜ್ಯ (ಇ-ಕಾಮರ್ಸ್) ಮಾದರಿ ಕಾನೂನಿನ ಅನ್ವಯ ಭಾರತವು ಮಾಹಿತಿ ತಂತ್ರಜ್ಞಾನ ಅಧಿನಿಯಮವನ್ನು 2000ನೇ ಇಸವಿಯಲ್ಲಿ ಜಾರಿಗೆ ತಂದಿದೆ. ಕಾನೂನು ಏಕರೂಪವಾಗಿರಬೇಕೆಂಬ ದೃಷ್ಟಿಯಿಂದ ಎಲ್ಲ ರಾಷ್ಟ್ರಗಳು ತಮ್ಮ ಕಾನೂನುಗಳನ್ನು ಅಧಿನಿಯಮಿಸುವಾಗ ಅಥವಾ ಅವುಗಳನ್ನು ಪರಿಷ್ಕರಿಸುವಾಗ ಸದರಿ ಮಾದರಿ ಕಾನೂನಿಗೆ ಅನುಕೂಲಕರ ಪರಿಗಣನೆ ನೀಡಬೇಕೆಂದು ಶಿಫಾರಸು ಮಾಡಲಾಗಿದೆ. ಭಾರತ ಸೈಬರ್ ಆಪರಾಧ ಮತ್ತು ಅವುಗಳ ನಿರ್ದಿಷ್ಟ ಪ್ರಕಾರಗಳನ್ನು ಸಂಘಟಿಸಿ ದಂಡನಾರ್ಹಗೊಳಿಸಿದೆ. ವಿದ್ಯುನ್ಮಾನ ದತ್ತಾಂಶದ ಪರಸ್ಪರ ವಿನಿಮಯ ಮತ್ತು ಇತರ ವಿದ್ಯುನ್ಮಾನ ಸಂವಹನದ ಮೂಲಕ ನಿರ್ವಹಿಸುವ ವಹಿವಾಟುಗಳಿಗೆ ಕಾನೂನಿನ ಮಾನ್ಯತೆಯನ್ನು ನೀಡಲಾಯಿತು ಮತ್ತು ಇದಕ್ಕೆ ಪೂರಕವಾಗಿ ಭಾರತ ದಂಡ ಸಂಹಿತೆ, 1860, ಭಾರತ ಸಾಕ್ಷ್ಯ ಅಧಿನಿಯಮ, 1872, ಬ್ಯಾಂಕರುಗಳ ಪುಸ್ತಕ ಸಾಕ್ಷ್ಯ ಅಧಿನಿಯಮ, 1891 ಮತ್ತು ಭಾರತದ ರಿಸರ್ವ್ ಬ್ಯಾಂಕ್ ಅಧಿನಿಯಮ, 1934 - ಸೂಕ್ತ ತಿದ್ದುಪಡಿ ಮಾಡಲಾಗಿದೆ.

ಸೈಬರ್ ಅಪರಾಧಗಳು

ಸೈಬರ್ ಅಪರಾಧಕ್ಕೆ ಮೂಲ ಕಂಪ್ಯೂಟರ್ ಮತ್ತು ಅದರ ಸಂಪನ್ಮೂಲಗಳು. ಅಪರಾಧಿಗಳು ಇಂಟರ್ನೆಟ್ ಸಂಪರ್ಕ ಪಡೆದು ಇತರರಿಗೆ ಕಂಪ್ಯೂಟರ್ ಬಳಕೆಯನ್ನು ನಿರ್ಬಂಧಿಸುತ್ತಿದ್ದಾರೆ ಮತ್ತು ವೈರಸ್ ಹರಡಿ ಇಡಿ ಸಂಪರ್ಕಗಳನ್ನೇ ನಾಶ ಮಾಡುತ್ತಿದ್ದಾರೆ. ಇಷ್ಟಲ್ಲದೆ, ವಿವಿಧ ರೀತಿಯಲ್ಲಿ ಅಂದರೆ, ದುರುದ್ದೇಶವುಳ್ಳ ಸಾಪ್ಟ್‌ವೇರ್‌ಗಳು(malware), ಸ್ಪ್ಯಾಮ್‌ಗಳು/ ಜಾಹಿರಾತು ಮಾದರಿಗಳು(bots), ವೈಯಕ್ತಿಕ ಮಾಹಿತಿಗಳುಳ್ಳ ಕ್ರೆಡಿಟ್ ಕಾರ್ಡ್‌ಗಳ ಅಥವಾ ಡೇಟಾಗಳನ್ನು ನಕಲಿಕರಿಸಿಕೊಳ್ಳುವುದು (phishing) ಮತ್ತು ಇನ್ನೊಬ್ಬರ ಬಗ್ಗೆ ತಪ್ಪು ಭಾವನೆ ಬರುವಂತೆ ಮಾಡುವುದು (spoofing), ಬೆದರಿಕೆಯ ಮೂಲಕ ಭಯೋತ್ವಾದನೆ ಉಂಟುಮಾಡುವುದು, ಹೀಗೆ ಹಲವು ರೂಪದಲ್ಲಿ ಜನ್ಮ ಪಡೆದುಕೊಳ್ಳುತ್ತಲೇ ಇರುತ್ತವೆ.

ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಕೆಲ ಉದಾಹರಣೆಗಳನ್ನು ನೋಡೋಣ.

ಅ. ಇಂದು ಮೋಸದ ಇ-ಮೇಲ್‌ಗಳಿಂದ ಬಾಧಿಸುವುದು ಅದರಲ್ಲೂ ಮುಖ್ಯವಾಗಿ ಹಣ ಹೊಂದುವ ಆಸೆಯಿಂದ ಹೊಸ-ಹೊಸ ಮಾದರಿಯಲ್ಲಿ ಇ-ಮೇಲ್ ಮುಖಾಂತರ ಆಕರ್ಷಕ ಚಿತ್ರಗಳನ್ನು ಕಳುಹಿಸುತ್ತಾರೆ, ಒಂದು ವೇಳೆ ಈ ಚಿತ್ರದ ಮೇಲೆ ಬಟನ್ ಒತ್ತಿದರೆ ವೈರಸ್ಸನ್ನು ಆಹ್ವಾನಿಸಿ ಕಂಪ್ಯೂಟರ್‌ನಲ್ಲಿ ಸ್ಥಾಪಿಸಿದಂತೆ (ಇನ್ಸ್‌ಟಾಲ್) ನಂತರ ಇದು ನಿಮ್ಮ ಇತರೇ ಫೈಲ್‌ಗಳನ್ನು ಸ್ವಯಂಚಾಲಿತವಾಗಿ ಮುಚ್ಚುತ್ತದೆ (ಅನ್‌ಲಾಕ್) ಇದನ್ನು ಪುನಃ ತೆರೆಯಬೇಕೆಂದರೆ ಹಣ ಪಾವತಿಸುವಂತೆ ನಿರ್ದೇಶಿಸುತ್ತದೆ. ಸೂಕ್ತ ತಿಳಿವಳಿಕೆ ಇಲ್ಲದೇ ಅಂತರ್ಜಾಲದ ಅಥವಾ ಇಂಟರ್‌ನೆಟ್‌ನ್ನು ರಕ್ಷಣಾತ್ಮಕವಾಗಿ ಬಳಸದೇ ಇದ್ದ ಕಾರಣ ಇಂತಹ ಮೋಸಕ್ಕೆ ಭಾರತದಲ್ಲಿ ಹಲವುಮಂದಿ ಹಣ ವ್ಯಯಿಸಿರುವ ಪ್ರಕರಣಗಳಿವೆ.

ಆ. ಸಾಮಾನ್ಯವಾಗಿ ಬ್ಯಾಂಕುಗಳ ಹೆಸರಿನಿಂದ ವೈಯಕ್ತಿಕ ಮಾಹಿತಿಗಳನ್ನು ಕೇಳುವ ಇ-ಮೇಲ್‌ಗಳು ನಮ್ಮ ಭಾರತದಲ್ಲಿ ಹೆಚ್ಚು. ಇವುಗಳಲ್ಲಿ ಹೆಚ್ಚು ನಕಲಿ ಮತ್ತು ನ್ಯಾಯಬದ್ದವಾದ ಬ್ಯಾಂಕುಗಳು ಯಾವಾಗಲೂ ವೈಯಕ್ತಿಕ ಮಾಹಿತಿಯನ್ನು ಮೇಲ್ ಮುಖಾಂತರ ಕೇಳುವುದಿಲ್ಲ. ಇದರ ಅವಶ್ಯಕತೆ ಇದ್ದರೆ ಲಿಖಿತವಾಗಿ ಅಥವಾ ಸಾಮಾನ್ಯವಾಗಿ ದೂರವಾಣಿಯ ಮುಖಾಂತರ ಸಂಪರ್ಕಿಸುವುದುಂಟು. ಆದ್ದರಿಂದ ಇನ್ನೂ ಮುಂದೆ ಇಂತಹ ಮೇಲ್‌ಗಳು ನಿಮಗೆ ಬಂದರೆ ಅದನ್ನು ತೆರೆಯುವುದಕ್ಕಿಂತ ಮುಂಚೆ ಸಂಬಂಧಪಟ್ಟ ಬ್ಯಾಂಕುಗಳನ್ನು ಸಂಪರ್ಕಿಸಿ ಖಾತ್ರಿಪಡಿಸಿಕೊಳ್ಳುವುದು ಒಳಿತು.

ಇ. ಇತ್ತೀಚಿನ ಪ್ರಕರಣವೊಂದರಲ್ಲಿ, ಮಾಹಿತಿ ತಂತ್ರಜ್ಞಾನ ಕಾಯಿದೆಯ ಅಡಿಯಲ್ಲಿ ಬೇರೆ ಕುಟುಂಬದ ಸದಸ್ಯರ ನಗ್ನ ಚಿತ್ರಗಳನ್ನು ತಮ್ಮ ವೆಬ್ ತಾಣದಲ್ಲಿ ಬಿತ್ತರಿಸುತ್ತಿರುವುದು ಸಾಬೀತಾಗಿ ಕೇರಳದ ಚರ್ಚಿನಲ್ಲಿ ಧರ್ಮೋಪದೇಶ ಮಾಡುತ್ತಿದ್ದ ಪ್ರವಚಕ ಮತ್ತು ಆತನ ಮಗನಿಗೆ ಒಂದು ವರ್ಷ ಸಜೆ ವಿಧಿಸಿ, ಹತ್ತು ಸಾವಿರ ರೂಪಾಯಿಗಳ ದಂಡ ಪಾವತಿಸುವಂತೆ ಆದೇಶಿಸಿರುತ್ತದೆ.

ಸದರಿ ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಅಧಿನಿಯಮ, 2008ರ ಕಲಮು 43ರಲ್ಲಿ ತಿಳಿಸಿರುವಂತೆ ಕಂಪ್ಯೂಟರ್ ವ್ಯವಸ್ಥೆಗೆ ಹಾನಿಯುಂಟು ಮಾಡಿದಾಗ, ಅದು ಆ ಕಂಪ್ಯೂಟರ್ ಒಡೆಯನ ಅಥವಾ ಅದರ ಪ್ರಭಾರ ಹೊಂದಿರುವ ಯಾರೇ ಆಗಲಿ, ಇತರ ವ್ಯಕ್ತಿಯ ಅನುಮತಿಯಿಲ್ಲದೆ ಮಾಡುವ ಈ ಕೆಳಕಂಡ ಕೃತ್ಯಗಳಿಗೆ ಬಾಧಿತನಾದ ವ್ಯಕ್ತಿಗೆ ಆದ ನಷ್ಟವನ್ನು ಪರಿಹಾರ ರೂಪದಲ್ಲಿ ಸಂದಾಯ ಮಾಡಲು ಹೊಣೆಗಾರನಾಗಿರತಕ್ಕದ್ದು. ಅಲ್ಲದೆ ಕಲಮು 66ರ ಮೇರೆಗೆ ಮೂರು ವರ್ಷಗಳವರೆಗಿನ ಕಾರಾಗೃಹವಾಸದಿಂದ ಅಥವಾ ಎರಡು ಲಕ್ಷ ರೂಪಾಯಿವರೆಗಿನ ಜುಲ್ಮಾನೆ ಅಥವಾ ಅವೆರಡರಿಂದಲೂ ದಂಡನೆಗೆ ಗುರಿಯಾಗಬೇಕಾಗುತ್ತದೆ, ಅವು ಇಂತಿವೆ:

(ಎ) ಅಂಥ ಕಂಪ್ಯೂಟರ್‌ಗೆ, ಅದರ ವ್ಯವಸ್ಥೆಗೆ ಅಥವಾ ಕಂಪ್ಯೂಟರ್ ಜಾಲವನ್ನು ಪ್ರವೇಶಿಸಿದರೆ ಅಥವಾ ಪ್ರವೇಶ ದೊರಕಿಸಿಕೊಂಡರೆ;
(ಬಿ) ತೆಗೆಯಬಹುದಾದ ಯಾವುದೇ ಸಂಗ್ರಹಣಾ ಮಾಧ್ಯಮದಲ್ಲಿ ಇರುವ ಅಥವಾ ಸಂಗ್ರಹಿಸಿರುವ ಮಾಹಿತಿ ಅಥವಾ ದತ್ತಾಂಶವೂ ಒಳಗೊಂಡಂತೆ ಅಂಥ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲದಿಂದ ಯಾವುದೇ ದತ್ತಾಂಶವನ್ನು (ಡೇಟಾ) ಕಂಪ್ಯೂಟರ್ ದತ್ತಾಂಶ ಸಂಗ್ರಹಣವನ್ನು ಅಥವಾ ಮಾಹಿತಿಯ ಭಾರ ಕುಗ್ಗಿಸಿದರೆ, ಪ್ರತಿ ತೆಗೆದರೆ ಅಥವಾ ಉದ್ಧೃತ ಭಾಗಗಳನ್ನು ತೆಗೆದುಕೊಂಡರೆ;
(ಸಿ) ಯಾವುದೇ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲದಲ್ಲಿ ಯಾವುದೇ ಕಂಪ್ಯೂಟರ್ ಕಲ್ಮಶಕಾರಕವನ್ನು ಅಥವಾ ಕಂಪ್ಯೂಟರ್ ವೈರಸನ್ನು ಸೇರಿಸಿದರೆ ಅಥವಾ ಸೇರುವಂತೆ ಮಾಡಿದರೆ;
(ಡಿ) ಯಾವುದೇ ಕಂಪ್ಯೂಟರ್‌ನ್ನು, ಕಂಪ್ಯೂಟರ್ ವ್ಯವಸ್ಥೆಯನ್ನು ಅಥವಾ ಕಂಪ್ಯೂಟರ್ ಜಾಲವನ್ನು, ದತ್ತಾಂಶವನ್ನು, ಕಂಪ್ಯೂಟರ್ ದತ್ತಾಂಶ ಸಂಗ್ರಹವನ್ನು ಅಥವಾ ಅಂಥ ಕಂಪ್ಯೂಟರ್‌ನಲ್ಲಿ, ಕಂಪ್ಯೂಟರ್ ವ್ಯವಸ್ಥೆಯಲ್ಲಿ ಅಥವಾ ಕಂಪ್ಯೂಟರ್ ಜಾಲದಲ್ಲಿರುವ ಯಾವುದೇ ಇತರ ಕಾರ್ಯಸರಣಿಯನ್ನು ಹಾನಿಗೊಳಿಸಿದರೆ ಅಥವಾ ಅದಕ್ಕೆ ಹಾನಿಯಾಗುವಂತೆ ಮಾಡಿದರೆ;
(ಇ) ಯಾವುದೇ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲವನ್ನು ಭಂಗಗೊಳಿಸಿದರೆ ಅಥವಾ ಭಂಗಗೊಳಿಸುವಂತೆ ಮಾಡಿದರೆ;
(ಎಫ್) ಯಾವುದೇ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲಕ್ಕೆ ಪ್ರವೇಶ ಪಡೆಯಲು ಅಧಿಕೃತನಾದ ಯಾರೇ ವ್ಯಕ್ತಿಗೆ ಯಾವುದೇ ಉಪಾಯದಿಂದ ಪ್ರವೇಶವನ್ನು ನಿರಾಕರಿಸಿದರೆ ಅಥವಾ ನಿರಾಕರಿಸುವಂತೆ ಮಾಡಿದರೆ;
(ಜಿ) ಈ ಅಧಿನಿಯಮದ ಮೇರೆಗೆ ಮಾಡಲಾದ ನಿಯಮಗಳ ಅಥವಾ ವಿನಿಯಮಗಳ ಉಪಬಂಧಗಳನ್ನು ಉಲ್ಲಂಘಿಸಿ, ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲಕ್ಕೆ ಯಾರೇ ವ್ಯಕ್ತಿಯು ಪ್ರವೇಶ ಪಡೆಯಲು ಅನುಕೂಲವಾಗುವ ಹಾಗೆ ಅವನಿಗೆ ನೆರವು ನೀಡಿದರೆ;
(ಎಚ್) ಯಾವುದೇ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲದಲ್ಲಿ ಹಸ್ತಕ್ಷೇಪ ಮಾಡಿ, ತಿದ್ದಿ ಅಥವಾ ಕೈವಾಡ ತೋರಿಸುವ ಮೂಲಕ ಒಬ್ಬ ವ್ಯಕ್ತಿಯು ಪಡೆದ ಸೇವೆಗಳ ವೆಚ್ಚವನ್ನು ಇನ್ನೊಬ್ಬ ವ್ಯಕ್ತಿಯ ಲೆಕ್ಕಕ್ಕೆ ತೋರಿಸುವಂತೆ ಮಾಡಿದರೆ.

ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಅಧಿನಿಯಮ, 2008ರ ಕಲಮು 65ರ ಮೇರೆಗೆ ಯಾವುದೇ ಕಂಪ್ಯೂಟರ್‌ನ ಮೂಲ ದಸ್ತಾವೇಜುಗಳನ್ನು ಅಥವಾ ಕಂಪ್ಯೂಟರ್ ಕಾರ್ಯಸರಣಿಯ ಅಥವಾ ಕಂಪ್ಯೂಟರ್‌ನ ಕಾರ್ಯ ವ್ಯವಸ್ಥೆಯ ಅಥವಾ ಕಂಪ್ಯೂಟರ್ ಜಾಲದ ಸಲುವಾಗಿ ಬಳಸುವ ಯಾವುದೇ ಕಂಪ್ಯೂಟರ್‌ನ ಮೂಲ ಸಂಕೇತಗಳು ಅಥವಾ ಆಜ್ಞೆಗಳು ಅಥವಾ ವಿನ್ಯಾಸಗಳು ಮತ್ತು ನಿರ್ದಿಷ್ಟ ರೂಪುರೇಷೆಗಳನ್ನು ಯಾರಾದರೂ ಗೊತ್ತಿದ್ದೂ ಅಥವಾ ಉದ್ದೇಶಪೂರ್ವಕವಾಗಿ ಬಚ್ಚಿಟ್ಟರೆ, ನಾಶಗೊಳಿಸಿದರೆ ಅಥವಾ ವ್ಯತ್ಯಾಸಗೊಳಿಸಿದರೆ, ಅಥವಾ ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿದ್ದೂ ಬಚ್ಚಿಡುವುದಕ್ಕೆ, ನಾಶ ಮಾಡುವುದಕ್ಕೆ ಅಥವಾ ವ್ಯತ್ಯಾಸಗೊಳಿಸುವುದಕ್ಕೆ ಇನ್ನೊಬ್ಬರನ್ನು ಪ್ರೇರೇಪಿಸಿದರೆ, ಅವನು ಮೂರು ವರ್ಷಗಳವರೆಗಿನ ಕಾರಾವಾಸದಿಂದ ಅಥವಾ ಎರಡು ಲಕ್ಷ ರೂಪಾಯಿವರೆಗಿನ ಜುಲ್ಮಾನೆ ಅಥವಾ ಅವೆರಡರಿಂದಲೂ ದಂಡನೆಗೆ ಗುರಿಯಾಗಬೇಕಾಗುತ್ತದೆ.ಇನ್ನೂ ಮುಂದುವರೆದು ಕಲಮು 66ರಲ್ಲಿ ಹಲವು ಸೈಬರ್ ಅಪರಾಧಗಳನ್ನು ಗುರುತಿಸಿ ಅವುಗಳಿಗೆ ಶಿಕ್ಷೆ ಮತ್ತು ಜುಲ್ಮಾನೆಯ ಪ್ರಮಾಣಗಳನ್ನು ನಿಗದಿಪಡಿಸಿರುತ್ತದೆ, ಈ ಕೆಳಗಿನವುಗಳು ಪ್ರಸ್ತುತದಲ್ಲಿ ಗುರುತಿಸಿರುವ ಅಪರಾಧಗಳು:1. ಕಂಪ್ಯೂಟರ್‌ನ ಅಥವಾ ಸಂಪರ್ಕ ಮಾಧ್ಯಮದ ಮೂಲಕ ಯಾವುದೇ ವ್ಯಕ್ತಿಗೆ ಅಕ್ರಮ ಸಂದೇಶವನ್ನು ತಲುಪಿಸುವುದು. 2. ಕಳವು ಮಾಡಿರುವ ಕಂಪ್ಯೂಟರ್‌ನ ಮೂಲ ಸಂಪತ್ತನ್ನು ಅಥವಾ ಸಂಪರ್ಕ ಮಾಧ್ಯಮವನ್ನು ತನ್ನ ವಶದಲ್ಲಿ ಹೊಂದಿರುವುದು. ಇದರಿಂದ ಲ್ಯಾಪ್‌ಟಾಪ್ ಕಳವು ಸಹಾ ಸೈಬರ್ ಅಪರಾಧವಾಗಿ ಪರಿಗಣಿಸಲಾಗುತ್ತದೆ. 3. ವೈಯಕ್ತಿಕ ಮಾಹಿತಿಗಳಾದ ವಿದ್ಯುನ್ಮಾನ ದಾಖಲೆಗಳಾದ ಅಂಕಿಚಿಹ್ನೆಯ(ಡಿಜಿಟಲ್ ಸಿಗ್ನೆಚರ್), ಗೌಪ್ಯ ಪದಗಳನ್ನು ಅಥವಾ ಯೂನಿಕ್ ಐಡೆಂಟಿಟಿ ನಂಬರ್‌ಗಳನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸಿ ಕೊಳ್ಳುವುದು.4. ಪರರೂಪಧಾರಣೆಯ ಮೂಲಕ ಕಂಪ್ಯೂಟರ್ ಸಂಪನ್ಮೂಲಗಳಿಂದ ಯಾರೇ ವ್ಯಕ್ತಿಗಳಿಗೆ ಮೋಸ ಮಾಡುವುದು.5. ಕಂಪ್ಯೂಟರ್‌ನ ಅಥವಾ ಸಂಪರ್ಕ ಮಾಧ್ಯಮದ ಮೂಲಕ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳ ಗೌಪ್ಯತೆಯನ್ನು ಬಯಲು ಮಾಡುವುದು.6. ಕಂಪ್ಯೂಟರ್‌ನ ಅಥವಾ ಸಂಪರ್ಕ ಮಾಧ್ಯಮದ ಮೂಲಕ ಭಯೋತ್ವಾದನೆ ಉಂಟುಮಾಡುವುದು (ಇತ್ತೀಚಿನ ಉಗ್ರಗಾಮಿಗಳ ಭಯೋತ್ವಾದನ ಕೃತ್ಯಗಳ ಬಳಕೆಗೆ ಸೈಬರ್ ಸ್ಪೇಸ್ ಸೂಕ್ತ ತಾಣವಾಗಿರುದನ್ನು ತಡೆಯುವುದೆ ಇದರ ಉದ್ದೇಶ).7. ವಿದ್ಯುನ್ಮಾನ ನಮೂನೆಯಲ್ಲಿ ಅಶ್ಲೀಲವಾದ ಮಾಹಿತಿಯನ್ನು ಪ್ರಕಟಿಸುವುದು.8. ಅಶ್ಲೀಲ ಮಾಹಿತಿಯ ರವಾನೆಯಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ಮತ್ತು ಭಾಗಿಯಾಗುವುದಕ್ಕೆ ಸಹಕರಿಸುವುದು.ಇಷ್ಟಲ್ಲದೆ ಈ ಅಧಿನಿಯಮದ ಮೇರೆಗೆ ರಚಿಸಲಾದ ಯಾವ ನಿಯಮಗಳ ಅಥವಾ ವಿನಿಮಯಗಳ ಉಲ್ಲಂಘನೆಗಾಗಿ ಪ್ರತ್ಯೇಕವಾಗಿ ಯಾವುದೇ ದಂಡನೆಯನ್ನು ಉಪಬಂಧಿಸಿದಿದ್ದರೆ ಅಂಥ ಯಾವುವೇ ನಿಯಮಗಳನ್ನು ಅಥವಾ ವಿನಿಮಯಗಳನ್ನು ಯಾರಾದರೂ ಉಲ್ಲಂಘಿಸಿದರೆ, ಅವನು ಅಂಥ ಉಲ್ಲಂಘನೆಯಿಂದ ಬಾಧಿತನಾದ ವ್ಯಕ್ತಿಗೆ ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಮೀರದಷ್ಟು ನಷ್ಟ ಪರಿಹಾರವನ್ನು ಸಂದಾಯ ಮಾಡಲು ಅಥವಾ ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಮೀರದಷ್ಟು ದಂಡನೆಗೆ ಗುರಿಯಾಗಲು ಬದ್ಧನಾಗತಕ್ಕದ್ದು.ತೆಗೆದುಕೊಳ್ಳಬೇಕಾದ ಕಾನೂನು ಕ್ರಮಗಳು:
ಮನೆಗಳಲ್ಲಿ, ಕಚೇರಿಗಳಲ್ಲಿ ಮತ್ತು ಇತರೇ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ಕಂಪ್ಯೂಟರ್‌ಗಳ ಬಳಕೆ ಹೆಚ್ಚುತ್ತಿದ್ದು ಇಂದು ಇಂಟರ್‌ನೆಟ್ ಏಕಮಾತ್ರ, ಶ್ರೀಮಂತಿಕೆಯ ಮತ್ತು ಮಾಹಿತಿಗಳ ಸಂಪನ್ಮೂಲಗಳ ಆಧಾರವಾಗಿದ್ದು, ಯಾವುದೇ ಮಾಹಿತಿಗಳನ್ನು ಪಡೆಯಲು ಸಹಕಾರಿಯಾಗಿ ಎಲ್ಲರ ಯೋಚನೆಗೆ ನಿಲುಕುವುದಾಗಿರುತ್ತದೆ. ಅಂತೆಯೇ ಅಪರಾಧಿಗಳಿಗೆ ಸ್ವರ್ಗತಾಣವು ಆಗಿರುತ್ತದೆ ಮತ್ತು ಇದರಿಂದ ಸೃಜಿಸಬಹುದಾದ ಅಪರಾಧಗಳ ಬಗೆಗೆ ತೊಂದರೆಗೀಡಾದ ವ್ಯಕ್ತಿಗಳು ಕೂಡಲೇ ಸಮೀಪದ ಪೋಲಿಸ್ ಠಾಣೆಗೆ ತಮ್ಮ ದೂರು ಅಥವಾ ಫಿರ್ಯಾದು ನೀಡಬೇಕಾಗುತ್ತದೆ. ಪ್ರಸ್ತುತದಲ್ಲಿ ಈ ವಿಷಯವಾಗಿ ನಮ್ಮ ದೇಶದಲ್ಲಿ ಈ ಸೈಬರ್ ಅಪರಾಧಗಳ ಬಗೆಗಿನ ದೂರುಗಳನ್ನು ಸ್ವೀಕರಿಸಲು ಈ ಕೆಳಕಂಡ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದ್ದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಮೇರೆಗಿನ ಮತ್ತು ಇತರೇ ಅಪರಾಧಿಕ ಕಾನೂನುಗಳ ಮೇರೆಗೆ ಕ್ರಮ ಕೈಗೊಳ್ಳಲು ಶಕ್ತವಾಗಿರುತ್ತವೆ, ಅವು ಇಂತಿವೆ:
ವಿಶೇಷ ಸೈಬರ್ ಪೋಲಿಸ್ ಠಾಣೆ : ಈ ಸೈಬರ್ ಕ್ರೈಮ್‌ಗಳಿಗೆ ಸಂಬಧಿಸಿದಂತೆ ಮೀಸಲಾದ ವಿಶೇಷ ಸೈಬರ್ ಪೋಲಿಸ್ ಠಾಣೆಗಳನ್ನು ಬೆಂಗಳೂರು ಸೇರಿದಂತೆ ಮುಂಬೈ ಮತ್ತು ಹೈದರಾಬಾದ್‌ಗಳಲ್ಲಿ ಸ್ಥಾಪಿಸಲಾಗಿದೆ. ಇವುಗಳು ತಮ್ಮ ಪ್ರದೇಶ ವ್ಯಪ್ತಿಯಲ್ಲಿ ಆಗುವ ಯಾವುದೇ ಸೈಬರ್ ಪ್ರಕರಣಗಳ ಕುರಿತಾಗಿ ಅದರಲ್ಲೂ ಭಯೋತ್ವಾದಕ ಇ-ಮೇಲ್‌ಗಳ ಮೇಲೆ ಅಥವಾ ಅಂತರ್ಜಾಲದಲ್ಲಿ ಆಗುವ ಅಪರಾಧಗಳ ಮೇಲೆ ಸ್ವಯಃ ಪ್ರೇರಿತವಾಗಿ ಎಫ್.ಐ.ಆರ್ ದಾಖಲಿಸಿಕೊಳ್ಳುತ್ತವೆ ಮತ್ತು ತನಿಖೆ ನೆಡೆಸಲು ಅಧಿಕಾರ ಪ್ರದತ್ತವಾಗಿರುತ್ತವೆ. ಬೆಂಗಳೂರಿನಲ್ಲಿರುವ ಸೈಬರ್ ಪೋಲಿಸ್ ಠಾಣೆ ಇಡೀ ಕರ್ನಾಟದ ವ್ಯಾಪ್ತಿಯನ್ನು ಹೊಂದಿದ್ದು ಸ್ಥಳೀಯ ಪೋಲಿಸ್ ಠಾಣೆಯ ಸಹಾಯದಿಂದ ಕೆಲಸ ನಿರ್ವಹಿಸುತ್ತಿದೆ.ಪೋಲಿಸ್ ಠಾಣೆ : ಈ ವಿಶೇಷ ಸೈಬರ್ ಪೋಲಿಸ್ ಠಾಣೆಗಳ ವ್ಯಾಪ್ತಿ ಪ್ರದೇಶವನ್ನು ಹೊರತುಪಡಿಸಿದರೆ ಉಳಿದ ಪ್ರದೇಶಗಳಿಗೆ ಆಯಾ ಸ್ಥಳೀಯ ಪೋಲಿಸ್ ಠಾಣೆಗಳ ವ್ಯಾಪ್ತಿಗೆ ಪ್ರಕರಣಗಳನ್ನು ಕುರಿತು ಎಫ್.ಐ.ಆರ್ ದಾಖಲಿಸಿಕೊಳ್ಳುವುದು ಮತ್ತು ತನಿಖೆ ನೆಡೆಸುವ ಅಧಿಕಾರವಿರುತ್ತದೆ.
ಇಂತಹ ದೂರಿನ ಅಥವಾ ಫಿರ್ಯಾದಿನ ಮೇಲೆ ದೋಷಿತ ಕಾರ್ಯಾಚರಣೆ, ಇದರ ಬಗೆಯಿಂದ ನೊಂದಣಿ ಮಾಡಿಕೊಳ್ಳುವುದು, ನೊಂದಣಿಯ ಆಧಾರದ ಮೇಲೆ ವರದಿ ನೀಡುವುದು, ತನಿಖೆ ನೆಡೆಸುವುದು, ಕಾನೂನಿ ಕ್ರಮ ಜರುಗಿಸುವುದು, ನಿರ್ಣಯ ನೀಡುವುದು ಮತ್ತು ನಿರ್ಣಯದ ಮೇರೆಗೆ ನಿರ್ವಹಿಸುವುದು. ಇವುಗಳು ಕಾನೂನಿನ ವ್ಯವಸ್ಥೆಯಲ್ಲಿನ ಘಟ್ಟಗಳು ಮತ್ತು ಪಾಲಿಸಲೇಬೇಕಾದ ನಿಯಮಗಳು. ಇಂತಹ ಕಾನೂನು ಕ್ರಮ ಕೈಗೊಳ್ಳುವ ಮುಂಚೆ ಸೂಕ್ತ ಸಲಹೆಯನ್ನು ನುರಿತ ಕಂಪ್ಯೂಟರ್ ಪರಿಣಿತರನ್ನು ಅಥವಾ ವಕೀಲರನ್ನು ಸಂಪರ್ಕಿಸುವುದು ಒಳಿತು.
ಇತ್ತಿಚೀನವರೆಗೂ, ಸೈಬರ್ ಅಪರಾಧದ ಬಗಗೆ ಆಸಕ್ತಿಯ ಕೊರತೆಯಿಂದ ಮಾಹಿತಿ ತಂತ್ರಜ್ಞಾನದ ವೃತ್ತಿಪರರು ಹಲವು ಪ್ರಕರಣಗಳಲ್ಲಿ ತಾವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೊರತೆ ಎದುರಿಸಬೇಕಾಗಿತ್ತು. ಇತ್ತಿಚೀನ ಅಪರಾಧಗಳಿಗೆ ಇರುವ ಹಳೆಯ ಕಾನೂನುಗಳು ಸೂಕ್ತವಾದವುಗಳಲ್ಲ ಎನ್ನುವ ಅಭಿಪ್ರಾಯ ಒಪ್ಪುವಂತಹದು ಆದರೆ ಹೊಸ ಕಾನೂನುಗಳು ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ನಿಜವಾಗಲು ಸಮರ್ಥನೀಯವೇ ಎಂಬ ಪ್ರಶ್ನೆ ಎದುರಿಸುತ್ತಿರುವುದು ಅಕ್ಷರಸಃ ಸತ್ಯ. ಇದರಿಂದಾಗಿಯೇ ಕಾನೂನು ರಚನಾಗಾರರು ಮತ್ತು ಇದನ್ನು ಕಾಪಾಡುವ ಸಂಸ್ಥೆಗಳು ಹಾಗೂ ಕಂಪ್ಯೂಟರ್ ವೃತ್ತಿಪರಾರು ಒಟ್ಟಾಗಿ ಇಂದು ಸೈಬರ್ ಅಪರಾಧಗಳನ್ನು ತಡೆಗಟ್ಟುವಂತಹ ಕೆಲಸ ಕೈಗೊಂಡು ಸಾರ್ವಜನಿಕರಿಗೆ ರಕ್ಷಣಾತ್ಮಕ ಇಂಟರ್‌ನೆಟ್ ಬಳಸಲು ವ್ಯವಸ್ಥೆಗೊಳಿಸಬೇಕಾಗುತ್ತದೆ.
ಸಂಗ್ರಹಿಸಿದ್ದು :
ಮೂಲ : ದಟ್ಸ್ ಕನ್ನಡ

No comments:

Post a Comment

Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು